ತಿಮ್ಮಪ್ಪನ ದರ್ಶನಕ್ಕೆ ಹೋದ ಭಕ್ತಾದಿಗಳಿಗೆ ಇನ್ನು ಮುಂದೆ ಬಾಲಾಜಿಯ ದರ್ಶನದ ಜೊತೆಗೆ ವಿನಾಯಕನ ಆಧ್ಯಾತ್ಮಿಕ ವನವನ್ನು ದರ್ಶನ ಮಾಡುವ ಭಾಗ್ಯವು ಲಭಿಸಿದೆ. ಟಿಟಿಡಿಯ ಅರಣ್ಯ ಇಲಾಖೆಯಿಂದ ತಿರುಮಲಾ ಘಾಟ್ನಲ್ಲಿ ಹೊಸ ಆಧ್ಯಾತ್ಮಿಕ ವನವೊಂದನ್ನು ಅಭಿವೃದ್ದಿ ಪಡಿಸಲಾಗಿದೆ.
`ವಿನಾಯಕ ವನಂ’ ಎಂಬ ಹೆಸರಿನಲ್ಲಿ ಅಭಿವೃದ್ದಿ ಪಡಿಸಲಾಗಿರುವ ಈ ವನವನ್ನು ಆಲಿಪರಿ ಅರಣ್ಯದ ಬಳಿಯ `ಎಕಾವಷ್ಟಮಿ ಪತ್ರ ವನಂ’ನ ಎರಡನೇ ಘಾಟ್ನ ವಿನಾಯಕ ದೇವಸ್ಥಾನದ ಪಕ್ಕ ನಿರ್ಮಿಸಲಾಗಿದೆ. ಹೊಸದಾಗಿ ಸುಂದರವಾಗಿ ನಿರ್ಮಾಣವಾಗಿರುವ ಈ ವಿನಾಯಕ ವನಂನಲ್ಲಿ 21 ಬಗೆಯ ಪ್ರಮುಖ ವಿಧದ ಎಲೆಗಳಿಂದ ಕಲ್ಪನಾತ್ಮಕವಾಗಿ ಅಭಿವೃದ್ದಿ ಪಡಿಸಲಾಗಿದೆ.
300 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಿಸಲಾಗಿರುವ ವಿನಾಯಕ ವನಂ ಶೇಷಾಚಲ ಶ್ರೇಣಿಗಳ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ನೋಡುವವರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ವಿಘ್ನನಿವಾರಕ ಗಣೇಶನ ದಿನ ನಿತ್ಯ ಪೂಜೆ, ಗಣೇಶ ಚತುರ್ಥಿಗೆ ವಿನಾಯಕ ವನಂನಲ್ಲಿರುವ ತುಳಸಿ, ವಿಷ್ಣುಕ್ರಾಂತ, ದೇವದಾರು, ಮತ್ತು ಬದಾರಿ ಪತ್ರಗಳನ್ನು ಬಳಸಿ ದಿನ ನಿತ್ಯ ಪೂಜಾ ಕೈಂಕರ್ಯ ನೆರವೇರಿಸಲಾಗುತ್ತದೆ.
ಅರಣ್ಯ ಉಪ ಸಂರಕ್ಷಣಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಟಿಟಿಡಿಯ ಅರಣ್ಯ ವಿಭಾಗವು ಆಧ್ಯಾತ್ಮಿಕತೆಯನ್ನು ತಿರುಪತಿ ಪ್ರವಾಸಿಗರ ಮೇಲೆ ಬಿರಲು ಈಗಾಗಲೇ ಮೂರು ಸಣ್ಣ ಅರಣ್ಯ ವನಗಳನ್ನು ಸೃಷ್ಟಿಸಿದೆ. `ನಕ್ಷತ್ರ ವನಂ’ `ರಾಶಿ ವನಂ’ ಕಾರ್ತಿಕ ವನಂ’ ಎಂದು ಇವುಗಳಿಗೆ ಹೆಸರಿಸಲಾಗಿದೆ.