ಭಕ್ತರಷ್ಟೇ ಅಲ್ಲ, ಬಾಲಾಜಿಯೂ ಮೆಚ್ಚಿದ್ದಾನೆ ಈ `ವಿಶ್ವ’ರಾಯರನ್ನು…

ಸರಿಯಾಗಿ 72 ವರ್ಷಗಳ ಹಿಂದೆ, ಏಳುಮಲೆ ಒಡೆಯನ ಪಾದಕ್ಕೆ ನಮಿಸಬೇಕು ಅಂದ್ರೆ, ಕಾಡಿನಲ್ಲಿ ಕಾಲ್ನಡಿಗೆಯಲ್ಲೇ ತೆರಳಬೇಕಿತ್ತು. ಕಲ್ಲು ಮುಳ್ಳುಗಳ ಮೆಟ್ಟಿಲ ದಾರಿಯಲ್ಲಿ  ಗೋವಿಂದಾ ಗೋವಿಂದಾ ಅಂತಾ ತಿರುಮಲ ಬೆಟ್ಟ ಏರಬೇಕಿತ್ತು.  ಈಗ, ಅರ್ಧ ಗಂಟೆಯಲ್ಲೇ, ಏಳುಕೊಂಡಲವಾಡನ ಸನ್ನಿಧಿಗೆ ತೆರಳಬಹುದು. ಕುಡಿದ ನೀರೂ ಅಲುಗಾಡದಂತೆ, ತಿರುಮಲ ಬೆಟ್ಟವನ್ನ ಏರಬಹುದು. ಅಷ್ಟೊಂದು ನುಣುಪಾದ ರಸ್ತೆ. ಸುತ್ತಲೂ ಸಪ್ತಗಿರಿ ಬೆಟ್ಟಗಳ ಹಚ್ಚ ಹಸಿರು. ಮೈಮನ ತಣಿಸುವ ನಿಸರ್ಗ ಸೌಂದರ್ಯ ಸವಿಯುತ್ತಾ, ವೆಂಕಟೇಶ್ವರ ಸನ್ನಿಧಿಗೆ ತೆರಳಬಹುದು. ಅದು ಏಪ್ರಿಲ್ 10. 1944ರ ಸಮಯ. ತಿರುಪತಿಯಲ್ಲಿ ಸಡಗರ, ಸಂಭ್ರಮ. ಗೋವಿಂದಾ ಗೋವಿಂದಾ ಸ್ಮರಣೆ ಮುಗಿಲು ಮುಟ್ಟಿತ್ತು. ಅಂದಿನ ಬ್ರಿಟಿಷ್ ಗವರ್ನರ್ ಅಡೂರರ್ ಹೋಪ್, ತಿರುಮತಿಗೆ ಬಂದವರೇ, ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಪಕ್ಕದಲ್ಲೇ ನಿಂತ್ತಿದ್ದ ವಯೋವೃದ್ದರೊಬ್ಬರನ್ನ ನೋಡಿ, ನಮಿಸಿದರು. ಅವರು ಬೇರಾರೂ ಅಲ್ಲ. ಸರ್. ಎಂ. ವಿಶ್ವೇಶ್ವರಯ್ಯ. ಎಸ್. ವಿಶ್ವೇಶ್ವರಯ್ಯ ಅವರೇ, ತಿರುಪತಿಗೂ ತಿರುಮಲವನ್ನೂ ಜೋಡಿಸಿದ ಪುಣ್ಯಾತ್ಮ. 18 ಕಿಲೋ ಮೀಟರ್ ಉದ್ದದ ದುರ್ಗಮ, ಕಡಿದಾದ ಬೆಟ್ಟವನ್ನ ಕಡಿದು, ರಸ್ತೆ ನಿರ್ಮಿಸಬೇಕೆಂದರೆ, ಆ ಕಾಲದಲ್ಲಿ ಸ್ಥಿತಿ ಹೇಗಿರಬೇಡ ಯೋಚಿಸಿ. ವಿಶ್ವೇಶ್ವರಯ್ಯ ಅವರ ಅಪಾರ ಬುದ್ದಿಮತ್ತೆಯನ್ನ ಬ್ರಿಟಿಷರು, ಒಪ್ಪಿ, ಅಪ್ಪಿಕೊಂಡಿದ್ದರು. ಅದಾಗಲೇ, ಕೆ.ಆರ್.ಎಸ್ ಜಲಾಶಯ, ಜಗತ್ಪ್ರಸಿದ್ದವಾಗಿತ್ತು. ದಿನ ಕಳೆದಂತೇ, ತಿರುಪತಿಗೆ ಬರುವ ವಾಹನಗಳ ಸಂಖ್ಯೆಯೂ ಹೆಚ್ಚುತ್ತಾ ಹೋಯ್ತು. ವಿಶ್ವೇಶ್ವರಯ್ಯ ಅವರು ನಿರ್ಮಿಸಿದ ಈ ರಸ್ತೆಯಲ್ಲೇ ಬೆಟ್ಟ ಹತ್ತುವುದು, ಮರಳಿ, ಇದೇ ರಸ್ತೆಯಲ್ಲೇ ಹಿಂದಿರುಗುವುದೂ ನಡೆದಿತ್ತು. ಮೂವತ್ತು ವರ್ಷ, ಬೆಟ್ಟಕ್ಕೆ ಹೋಗಲು ಒಂದೇ ರಸ್ತೆಯನ್ನು ಉಪಯೋಗಿಸಲಾಗ್ತಿತ್ತು. ಮೂವತ್ತು ವರ್ಷಗಳ ನಂತರ, ಅಂದ್ರೆ, 1974ರಲ್ಲಿ, ತಿರುಮಲದಿಂದ ಕೆಳಗೆ ಇಳಿಯುವ ರಸ್ತೆಯ ನಿರ್ಮಾಣವಾಯ್ತು. ವಿಪರ್ಯಾಸ ನೋಡಿ, ಮೂವತ್ತು ವರ್ಷಗಳ ನಂತರ ನಿರ್ಮಿಸಿದ ರಸ್ತೆ, 1944ರಲ್ಲಿ ವಿಶ್ವೇಶ್ವರಯ್ಯ ಅವರು ನಿರ್ಮಿಸಿದ ರಸ್ತೆಗೆ ಯಾವ ಕೋನದಲ್ಲೂ ಸರಿ ಸಮಾನ ಆಗಲಾರದು. ಬೆಟ್ಟದಿಂದ ಕೆಳಗಿಳಿಯುವ ಮಾರ್ಗದಲ್ಲಿ ಹೆಚ್ಚಿನ ಭೂ ಕುಸಿತಗಳು ಸಂಭವಿಸುತ್ತಿವೆ. ಬೆಟ್ಟದ ಪದರಗಳನ್ನ ಹೇಗೆ ಕೊರೆಯಬೇಕೆಂಬುದೇ, ಆಧುನಿಕ ಶಿಲ್ಪಿಗಳಿಗ ಸವಾಲಾಗಿದೆ. ಇತ್ತೀಚೆಗೆ, ಹೊಸ ರಸ್ತೆಯನ್ನು ಮೂರು ತಿಂಗಳುಗಳ ಕಾಲ ಮುಚ್ಚಲಾಗಿತ್ತು. ಆಗ, ಹಳೆಯ ರಸ್ತೆಯಲ್ಲೇ ಬೆಟ್ಟ ಏರುವುದು, ಇಳಿಯುವುದಕ್ಕೆ ಅವಕಾಶ ಮಾಡಿಕೊಡಲಾಗಿತ್ತು. 72 ವರ್ಷಗಳ ಹಿಂದೆ, ಸರ್. ಎಂ. ವಿಶ್ವೇಶ್ವರಯ್ಯ ನಿರ್ಮಿಸಿದ ಬೆಟ್ಟ ಹತ್ತುವ ಮಾರ್ಗ, ಈಗಲೂ, ಯಾವುದೇ ತೊಂದರೆ ಇಲ್ಲದೇ, ಸುರಕ್ಷಿತವಾಗಿದೆ. ಇದು ಸರ್.ಎಂ. ವಿಶ್ವೇಶ್ವರಯ್ಯ ಅವರ ಬುದ್ದಿಮತ್ತೆ.  ಮೂವತ್ತೈದಕ್ಕೂ ಹೆಚ್ಚು ಹೇರ್ ಪಿನ್ ತಿರುವುಗಳಲ್ಲಿ ಬಳುಕುತ್ತಾ ಸುಲಭವಾಗಿ ಬೆಟ್ಟ ಹತ್ತಬಹುದು. ಇದೇ ಕಾರಣಕ್ಕೆ ಕೇವಲ ಜನರಷ್ಟೇ ಅಲ್ಲ, ಆ ಬಾಲಾಜಿಯೂ, ವಿಶ್ವೇಶ್ವರಯ್ಯ ಅವರನ್ನ ಮೆಚ್ಚಿರಲೂ ಸಾಕು.

Related posts

Leave a Comment