ತಿಮ್ಮಪ್ಪನ ನೋಡೋಕೆ ಹೋದ್ರೆ, ತಿಮ್ಮಪ್ಪನಷ್ಟೇ ನೋಡಿ ಬರುತ್ತೀರಾ…!

ನೀವು ತಿರುಪತಿಗೆ ಹೋಗ್ತೀರಾ. ನಿಮ ಶಕ್ತ್ಯಾನುಸಾರದಂತೆ ಪರಮಾತ್ಮನ ದರ್ಶನವನ್ನೂ ಮಾಡ್ತೀರಾ. ಆದ್ರೆ, ವೆಂಕಟೇಶ್ವರನ ಸನ್ನಿಧಿಗೆ ತೆರಳುತ್ತಿದ್ದಂತೇ, ಕೆಲವು ದೇವಾಲಯಗಳಿವೆ. ಆದ್ರೆ, ನಿಮ್ಮ ಕಣ್ಣು, ಮನವೆಲ್ಲಾ ತಿಮ್ಮಪ್ಪನನ್ನು ಯಾವಾಗ ನೋಡುತ್ತೀವೋ ಎಂದು ಕಾತರಿಸಿರುತ್ತದೆ. ಗರ್ಭಗುಡಿಗೆ ಹೋಗುವ ಮುನ್ನ, ಪರಮಾತ್ಮನ ದರ್ಶನ ಮಾಡಿದ ನಂತರವೂ, ಕೆಲವು ದೇವಾಲಯಗಳತ್ತಲೂ ಕಣ್ಣು ಹರಿಸಿ

ವರದರಾಜ ದೇವಾಲಯ : ತಿರುಪತಿ ತಿಮ್ಮಪ್ಪನ ದೇವಾಲಯದಲ್ಲಿ ಬೆಳ್ಳಿ ಬಾಗಿಲು ಬಹಳ ವೈಶಿಷ್ಟ್ಯತೆ ಹೊಂದಿದೆ. ವಿಮಾನಪ್ರದಕ್ಷಿಣಂ ಸ್ಥಳದಲ್ಲೇ ಇದೆ ವರದರಾಜ ಸ್ವಾಮಿ ದೇವಾಲಯ. ವರದರಾಜ ಸ್ವಾಮಿಯೂ, ವಿಷ್ಣುವಿನ ಮತ್ತೊಂದು ರೂಪವೇ. ಈ ವಿಗ್ರಹ ಯಾವಾಗ ಪ್ರತಿಷ್ಟಾಪಿತವಾಯ್ತು ಎಂಬ ನಿಖರ ಮಾಹಿತಿ ಲಭ್ಯವಿಲ್ಲ. ದೇವಾಲಯವನ್ನು ಪ್ರವೇಶಿಸುತ್ತಿದ್ದಂತೇ, ವರದರಾಜ ಸ್ವಾಮಿ, ಭಕ್ತರಿಗೆ ದರ್ಶನ ನೀಡುತ್ತಾನೆ.

ಯೋಗ ನರಸಿಂಹ ದೇವಾಲಯ : ಯೋಗ ನರಸಿಂಹ, ವಿಷ್ಣುವಿನ ಐದನೇ ಅವತಾರ. ಈ ದೇವಾಲಯ ಕೂಡಾ, ವರದರಾಜ ಸ್ವಾಮಿ ದೇವಾಲಯದ ಸಮೀಪವೇ ಇದೆ. ವಿಮಾನಪ್ರದಕ್ಷಿಣಂ ಸ್ಥಾನದಲ್ಲಿ, ಯೋಗ ನರಸಿಂಹ, ಪಶ್ಚಿಮಾಭಿಮುಖವಾಗಿ ಕುಳಿತ್ತಿದ್ದಾನೆ.ಧ್ಯಾನಾಸಕ್ತನಾಗಿ ಕುಳಿತಿರುವ ಯೋಗಾ ನರಸಿಂಹ ಸ್ವಾಮಿ ವಿಗ್ರಹ ಬಹಳ ಆಕರ್ಷಕವಾಗಿದೆ.

ಗರುಡ ದೇವಸ್ಥಾನ :  ಎಲ್ಲಿ ಪರಮಾತ್ಮನೋ, ಅಲ್ಲೇ ಗರುಡದೇವನೂ ಇರುತ್ತಾನೆ. ಪರಮಾತ್ಮನ  ಅತೀ ಸಾಮಿಪ್ಯ ದೊರಕುವುದೆಂದ್ರೆ, ಈ ಗರುಡ ದೇವನಿಗೆ ಮಾತ್ರವೇ. ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕೆಂದುಕೊಳ್ಳುವಷ್ಟರಲ್ಲೇ, ಎದುರಲ್ಲೇ ಕೈಮುಗಿದು ನಿಂತ್ತಿರುತ್ತಾನೆ ಗರುಡದೇವ. ಆರು ಅಡಿ ಎತ್ತರದ ಗರುಡ ವಿಗ್ರಹ, ಚಿನ್ನದ ಬಾಗಿಲಿನ  ಎದಿರೇ ನಿಂತ್ತಿದ್ದಾನೆ. ತಿಮ್ಮಪ್ಪನ ಗರ್ಭಗುಡಿಯ ಸ್ವರ್ಣ ಬಾಗಿಲಿನ ಅಕ್ಕಪಕ್ಕದಲ್ಲಿ ದ್ವಾರ ಪಾಲಕರಾದ ಜಯ – ವಿಜಯ ಸಹೋದರರು ನಿಂತ್ತಿರುತ್ತಾರೆ. ಅವರ ಎದುರಿಗೇ, ಗರುಡ ದೇವ, ತಿಮ್ಮಪ್ಪನಿಗೆ ಕೈ ಮುಗಿಯುತ್ತಾ ನಿಂತ್ತಿದ್ದಾನೆ.

ಭೂವರಾಹ ಸ್ವಾಮಿ ದೇವಸ್ಥಾನ : ತಿರುಮಲ ಬೆಟ್ಟದ ಮೇಲಿರುವ ಭೂ ವರಾಹ ಸ್ವಾಮಿ ದೇವಾಲಯ, ವೆಂಕಟೇಶ್ವರನ ದೇವಾಲಯಕ್ಕಿಂತಲೂ, ಪುರಾತನವಾದುದು ಎಂಬುದು ಪುರಾಣ ಐತಿಹ್ಯ. ವೆಂಕಟೇಶ್ವರನಿಗೆ, ಸಪ್ತಗಿರಿಯಲ್ಲಿ ನೆಲೆ ನಿಲ್ಲಲು ಜಾಗ ಕೊಟ್ಟಿದ್ದೇ, ಭೂ ವರಾಹಸ್ವಾಮಿ. ತಿರುಮಲದ ಉತ್ತರ ದಿಕ್ಕಿನಲ್ಲಿ ಸ್ವಾಮಿ ಪುಷ್ಕರಿಣಿ ಬಳಿ, ಭೂ ವರಾಹ ಸ್ವಾಮಿ ದೇಗುಲವಿದೆ. ತಿರುಮಲದ ಸಂಪ್ರದಾಯದಂತೆ, ದಿನದ ಮೊಟ್ಟಮೊದಲ ನೈವೇದ್ಯ ದಕ್ಕುವುದೇ ಭೂ ವರಾಹ ಸ್ವಾಮಿಗೆ. ಆ ಬಳಿಕವೇ, ವೆಂಕಟೇಶ್ವರನಿಗೆ. ಅದೇ ರೀತಿ, ತಿರುಪತಿಗೆ ಹೋಗುವ ಭಕ್ತರು, ಮೊದಲು ಭೂ ವರಾಹ ಸ್ವಾಮಿ ದರ್ಶನ ಮಾಡಿ, ಆ ನಂತರವಷ್ಟೇ ತಿಮ್ಮಪ್ಪನ ಕಾಣಲು ತೆರಳುತ್ತಾರೆ.

ಬೇಡಿ ಅಂಜನೇಯ ಸ್ವಾಮಿ ದೇವಾಲಯ : ಬೇಡಿ ಆಂಜನೇಯ ಸ್ವಾಮಿ. ಎರಡೂ ಕೈಗಳನ್ನೂ ಕಟ್ಟಿದ ರೀತಿಯಲ್ಲಿ, ತಿಮ್ಮಪ್ಪನಿಗೆ ನಮಿಸುತ್ತಿದ್ದಾನೆ ಪರಮಭಕ್ತ ಆಂಜನೇಯ. ಭಕ್ತರು ತಂದ ತೆಂಗಿನಕಾಯಿಗಳನ್ನ ಒಡೆಯುವ ಸ್ಥಳದಲ್ಲೇ ಬೇಡಿ ಆಂಜನೇಯ ಸ್ವಾಮಿ ದೇವಾಲಯವಿದೆ.

ವಕುಲಮಾತಾ ಸನ್ನಿಧಿ : ವಕುಲಮಾತಾ, ಪರಮಾತ್ಮ ಶ್ರೀನಿವಾಸನ ತಾಯಿ. ವೆಂಕಟೇಶ್ವರನ ಸನ್ನಿಧಿಯಲ್ಲೇ ವಕುಲಮಾತಾ ಸನ್ನಿಧಿಯೂ ಇದೆ. ಪುರಾಣ ಐತಿಹ್ಯದ ಪ್ರಕಾರ, ಪುತ್ರ ಶ್ರೀನಿವಾಸನಿಗೆ ತಯಾರಿಸುವ ಅಡುಗೆ ಜವಾಬ್ದಾರಿ ನೋಡಿಕೊಳ್ಳುವುದೇ, ವಕುಲಮಾತಾ. ಹೀಗಾಗಿ, ವಕುಲಮಾತಾ ದೇವಾಲಯದಲ್ಲಿ ಒಂದು ಕಿಂಡಿ ಇದೆ. ಈ ಕಿಂಡಿ ಮೂಲಕ, ಅಡುಗೆ ಮನೆಯ ನೋಟ ಲಭ್ಯ. ತಾಯಿ ವಕುಲಮಾತಾ, ವೆಂಕಟೇಶ್ವರನಿಗೆ ತಯಾರು ಮಾಡುವ ಅಡುಗೆಯ ಉಸ್ತುವಾರಿ ವಹಿಸಿದ್ದಾಳೆ.

ಕುಬೇರ ಸನ್ನಿಧಿ :ಪರಮಾತ್ಮನಿಗೂ, ಕುಬೇರನಿಗೂ ಇರುವ ಸಂಬಂಧ ಎಲ್ಲರಿಗೂ ತಿಳಿದಿದ್ದೇ. ಶ್ರೀನಿವಾಸ ಕಲ್ಯಾಣಕ್ಕೆ, ಹಣದ ನೆರವು ನೀಡಿದವನೇ ಕುಬೇರ. ತಿಮ್ಮಪ್ಪನ ದರ್ಶನಕ್ಕೆಂದು ಗರ್ಭಗುಡಿ ಸನಿಹ ಹೋಗುತ್ತಿದ್ದಂತೇ, ವೆಂಕಟೇಶ್ವರನ ಸನ್ನಿಧಿಯ ಬಲಕ್ಕೇ ಕುಬೇರನೂ ದರ್ಶನ ನೀಡುತ್ತಾನೆ. ದಕ್ಷಿಣಾಭಿಮುಖವಾಗಿ ಕುಬೇರ ಇಲ್ಲಿದ್ದಾನೆ.

ರಾಮಾನುಜ ದೇವಾಲಯ : ವೆಂಕಟೇಶ್ವರನ ಸನ್ನಿಧಿಯ ಉತ್ತರಕ್ಕೆ, ವಿಮಾನಪ್ರದಕ್ಷಿಣೆ ಸ್ಥಳದಲ್ಲಿದೆ ರಾಮಾನುಜರ ದೇವಾಲಯ.  ಈ ದೇವಾಲಯವನ್ನು 13 ನೇ ಶತಮಾನದಲ್ಲಿ ನಿರ್ಮಿಸಿದ ಬಗ್ಗೆ ದಾಖಲೆಗಳಿವೆ.

 

Related posts

Leave a Comment