ರಾಮಾನುಜಾಚಾರ್ಯ- ಕಲಿಯುಗದ ಲಕ್ಷ್ಮಣ

ಶ್ರೀರಂಗಂನ ಪಂಡಿತರು, ಸುಮಾರು ಇಪ್ಪತ್ತೈದು- ಮೂವತ್ತರ ಆಸುಪಾಸಿನಲ್ಲಿರುವ ಕಾಂಚಿಪುರಂನಲ್ಲಿದ್ದ ತರುಣ ಬ್ರಾಹ್ಮಣನಿಗೆ ತಮ್ಮ ಶಿಷ್ಯನಾಗುವಂತೆ ಹೇಳಿ ಕಳುಹಿಸುತ್ತಾರೆ. ಆ ತರುಣ ಅಲ್ಲಿಗೆ ಬರುವಷ್ಟರಲ್ಲಿ, ಪಂಡಿತರು ಸಾವಿಗೀಡಾಗಿರುತ್ತಾರೆ. ಆದರೆ, ಅವರ ಬಲಗೈಯ ಮೂರು ಬೆರಳುಗಳು ಮಡಚಿರುತ್ತವೆ. ಅಲ್ಲಿರುವ ಇತರ ಶಿಷ್ಯರ ಪ್ರಕಾರ ಅವರೆಂದೂ ತಮ್ಮ ಗುರುಗಳ ಕೈ ಬೆರಳುಗಳು ಈ ರೀತಿ ಬಿಗಿಯಾಗಿ ಮಡಚಿದ್ದನ್ನ ನೋಡಿರಲಿಲ್ಲ. ಯಾರೇನೇ ಮಾಡಿದರೂ ಆ ಬೆರಳುಗಳನ್ನು ನೇರವಾಗಿಸಲು ಆಗಲಿಲ್ಲ.  ಮೇಧಾವಿಯಾದ ಆ ತರುಣ ಮೂರು ಭಾಷೆಗಳನ್ನು ಕೊಡುತ್ತಾನೆ. ‘ನಾನು ತಮಿಳು ವೇದಗಳನ್ನು ಜನಸಾಮಾನ್ಯರಿಗೆ ತಲುಪಿಸುತ್ತೇನೆ, ‘ಶ್ರೀ-ಭಾಷ್ಯ’ (ಬ್ರಹ್ಮಸೂತ್ರದ ವಿವರ) ವನ್ನು ಬರೆಯುತ್ತೇನೆ ಮತ್ತು ಅಪಾರ ಸಾಧನೆಯನ್ನು ಮಾಡಿದ ಯೋಗ್ಯನೆನಿಸುವ ವೈಷ್ಣವನಿಗೆ ನಾನು ‘ಪರಾಶರ’ (ವ್ಯಾಸ ಮಹರ್ಷಿಯ ತಂದೆಯಾದ ಪರಾಶರರಿಗೆ ಗೌರವ ಸೂಚಿಸಲು) ನೆಂದು ನಾಮಕರಣ ಮಾಡುತ್ತೇನೆ’ ಹೀಗೆ ಭಾಷೆ ನೀಡುತ್ತಿರುವಂತೆ ಪವಾಡವೇನೋ ಅನ್ನುವಂತೆ, ತರುಣನ ಒಂದೊಂದೇ ಮಾತು ಮುಗಿಯುತ್ತಿದ್ದಂತೆಯೇ ಪಂಡಿತರ ಮುಚ್ಚಿದ ಬೆರಳುಗಳು ಒಂದೊಂದಾಗಿಯೇ ಸಡಿಲವಾಗುತ್ತಾ, ನೇರವಾಗುತ್ತಾ ಹೋಗುತ್ತವೆ. ಆ ಪಂಡಿತರೇ ಆಳ್ವಂದರು ಮತ್ತು ಆ ತರುಣನೇ ರಾಮಾನುಜಾಚಾರ್ಯರು (ರಾಮಾನುಜ). ತಾವು ಮಾತುಕೊಟ್ಟಂತೆ ರಾಮಾನುಜರು ನಡೆದುಕೊ0ಡರೂ ಕೂಡ.

‘ವಿಶಿಷ್ಟಾದ್ವೈತ’ದ ಪ್ರತಿಪಾದಕರಾದ ರಾಮಾನುಜಾಚಾರ್ಯರು ಹುಟ್ಟಿದ್ದು ಚನ್ನೈ (ಆಗಿನ ಮದರಾಸು) ನಿಂದ ಸುಮಾರು ನಲವತ್ತು ಕಿಲೋಮೀಟರ್ ದೂರದಲ್ಲಿರುವ ಶ್ರೀಪೆರಂಬದೂರಿನಲ್ಲಿ; ಬ್ರಾಹ್ಮಣರಾದ ಕೇಶವಸೋಮಯಾಜಿ ದೀಕ್ಷಿತ ಮತ್ತು ಕಾಂತಿಮತಿಯ ಮಗನಾಗಿ ೧೦೧೭ರ ಆರ್ದ್ರ (ಆರಿದ್ರಾ) ನಕ್ಷತ್ರದಲ್ಲಿ.  ವಿಷ್ಣು ಅವತಾರ ಎತ್ತಿದಾಗೆಲ್ಲ ಅವನ ಸೇವಕನಾದ ಆದಿಶೇಷನೂ ವಿಷ್ಣುವಿನ ಜೊತೆಗೆ ಇದ್ದ ಎಂಬುದು ಪ್ರತೀತಿ. ತ್ರೇತಾ ಯುಗದಲ್ಲಿ ಲಕ್ಷ್ಮಣನಾಗಿ, ದ್ವಾಪರದಲ್ಲಿ ಬಲರಾಮನಾಗಿ ಅವತಾರ ಎತ್ತಿದ ಆದಿಶೇಷ ಕಲಿಯುಗದಲ್ಲಿ ರಾಮಾನುಜಾಚಾರ್ಯನಾಗಿ ಅವತರಿಸಿದ್ದಾನೆಂದು ನಂಬಿಕೆ. ಸೌಮಿತ್ರೆಯ ಮಕ್ಕಳಾದ ಲಕ್ಷ್ಮಣ ಮತ್ತು ಶತ್ರುಘ್ನ ಹಾಗೂ ರಾಮಾನುಜಾಚಾರ್ಯರು ಹುಟ್ಟಿದ ತಿಂಗಳು (ಚೈತ್ರಮಾಸ) ಮತ್ತು ರಾಶಿ (ಕರ್ಕಾಟಕರಾಶಿ) ಒಂದೇ ಎಂಬುದು ಗಮನಿಸಬೇಕಾದ ಅಂಶ.

ಬಾಲ್ಯದಿಂದಲೇ ಚೂಟಿಯಾಗಿದ್ದ ರಾಮಾನುಜಾಚಾರ್ಯ ಎಲ್ಲ ಗುರುಗಳಿಗೂ ಅಚ್ಚುಮೆಚ್ಚಿನ ವಿದ್ಯಾರ್ಥಿ. ವಿಷಯಗಳು ಎಷ್ಟೇ ಸಂಕೀರ್ಣವಾಗಿರಲಿ, ಒಮ್ಮೆ ಕೇಳಿಸಿಕೊಂಡರೆ ಸಾಕು, ತಲೆಯಲ್ಲಿ ಉಳಿದುಬಿಡುತ್ತಿದ್ದವು. ಹದಿರಾನೆಯ ವಯಸ್ಸಿನಲ್ಲಿಯೇ ಸುಂದರವಾದ ತರುಣಿಯೊಂದಿಗೆ ಇವರ ಮದುವೆ ಆಗಿತ್ತಾದರೂ ಮುಂದೊಂದು ದಿನ ಮಡದಿಯನ್ನು ತೊರೆದು ಸನ್ಯಾಸತ್ವವನ್ನು ಸ್ವೀಕಾರ ಮಾಡಿದರು. ಮದುವೆಯಾದ ಸ್ವಲ್ಪ ದಿನದಲ್ಲೇ ಇವರ ತಂದೆ ತೀರಿಹೋಗಿದ್ದರಿಂದ, ಇವರು ಮಡದಿ ಮತ್ತು ತಾಯಿಯೊಡನೆ ಕಾಂಚೀಪುರಂನಲ್ಲಿ ಬಂದು ನೆಲೆಸಿದರು. ಇದಕ್ಕೆ ಇನ್ನೂ ಒಂದು ಕಾರಣವೂ ಇತ್ತು. ಆಗಿನ ಕಾಲಕ್ಕೆ, ಪ್ರಕಾಂಡ ಪಂಡಿತರೆಂದೇ ಪ್ರಖ್ಯಾತರಾದ ಯಾದವಪ್ರಕಾಶರು ಇದ್ದದ್ದು ಕಾಂಚೀಪುರಂನಲ್ಲಿಯೇ. ರಾಮಾನುಜಾಚಾರ್ಯರು ಯಾದವಪ್ರಕಾಶರ ಶಿಷ್ಯರಾಗಿ ಅಧ್ಯಯನ ಮಾಡಲು ಪ್ರಾರಂಭಿಸುತ್ತಾರೆ. ಯಾದವ ಪ್ರಕಾಶರ ಬೋಧನೆಗಳನ್ನು ಈಗಲೂ ‘ಯಾದವ ಸಿದ್ಧಾಂತ’ ಎಂದೇ ಗುರುತಿಸಲಾಗುತ್ತದೆ. ಅದ್ವೈತ ಮತದಲ್ಲಿ ನಂಬಿಕೆಯಿದ್ದ ಯಾದವ ಪ್ರಕಾಶರ ಉಪದೇಶಗಳು ಇವರಿಗೆ ಸರಿ ಅನ್ನಿಸುವುದಿಲ್ಲ. ಗುರು ಎಂಬ ಒಂದೇ ಕಾರಣಕ್ಕೆ ತುಂಬಾ ಕಾಲ ಸಹಿಸಿಕೊಂಡರೂ ಕೊನೆಗೊಂದುಸಲ ಗುರುವಿಗೆ ತಮ್ಮ ಭಿನ್ನ ನಿಲುವಿನ ಬಗ್ಗೆ ತಿಳಿಸುತ್ತಾರೆ. ಆಗ ಅವರು ಪ್ರತಿಪಾಸಿದ್ದು ವಿಶಿಷ್ಟಾದ್ವೈತ ಸಿದ್ಧಾಂತ. ಇದು ಯಾದವ ಪ್ರಕಾಶರಿಗೆ ಸಹ್ಯ ಅನ್ನಿಸುವುದಿಲ್ಲ. ಗುರುಶಿಷ್ಯರಲ್ಲಿ ಏರ್ಪಟ್ಟ ವೈಮನಸ್ಸಿನ ಕಾರಣ ಮತ್ತು ಆಳ್ವಂದರರ ಕೋರಿಕೆಯ ಮೇರೆಗೆ, ರಾಮಾನುಜರು ಶ್ರೀರಂಗಂಗೆ ಹೋಗುತ್ತಾರೆ.

ಸಮಾಜದಲ್ಲಿನ ಜಾತಿಭೇದ ಮತ್ತು ಲಿಂಗತಾರತಮ್ಯವನ್ನು ಹೋಗಲಾಡಿಸಲು ರಾಮಾನುಜರು ದುಡಿದಿದ್ದಾರೆ. ಅದಕ್ಕೊಂದು ನಿದರ್ಶನ ಇಲ್ಲಿದೆ. ಅವರು ತಮ್ಮ ಕಾಲದಲ್ಲಿ ೭೪ ಅಧಿಪತಿಗಳನ್ನು ನೇಮಿಸಿದರು. ಅದರಲ್ಲಿ ಸಾಕಷ್ಟು ಜನ ಬ್ರಾಹ್ಮಣೇತರರು ಮತ್ತು ೫ ಜನಮಹಿಳೆಯರು ಎಂಬುದು ಗಮನಿಸಬೇಕಾದ ಅಂಶ.  ದೇವರ ಭಕ್ತ ಯಾರೇ ಆಗಿರಲಿ, ಅವರುಂಡ ತಟ್ಟೆಯಲ್ಲಿ ಊಟಮಾಡುವುದಕ್ಕೆ, ಅವರ ಪಾದ ತೊಳೆಯಲೂ ರಾಮಾನುಜರು ಹಿಂದೆಮುಂದೆ ನೋಡುತ್ತಿರಲಿಲ್ಲ. ‘ಜನಿವಾರ ಮಾತ್ರದಿಂದ ಮನುಷ್ಯ ಬ್ರಾಹ್ಮಣನಲ್ಲ, ಭಗವಂತನ ಸೇವೆಗೆ ತನ್ನನ್ನು ಮೀಸಲಿಟ್ಟವನೇ ನಿಜವಾದ ಬ್ರಾಹ್ಮಣ’ ಅನ್ನುವುದು ಅವರ ಅಭಿಪ್ರಾಯವಾಗಿತ್ತು. ಈ ಅಭಿಪ್ರಾಯ ಮತ್ತು ಅವರಿಗಿದ್ದ ಅಗಾಧ ಪಾಂಡಿತ್ಯವೇ ಅವರಿಗೆ ಮುಳುವಾಗಿ ಅವರ ಮೇಲೆ ಎರಡು ಸಲ (ಚೋಳರ ರಾಜನಾದ ಕ್ರಿಮಿಕಾಂತ ಮತ್ತು ಶ್ರೀ ರಂಗಂನ ಪ್ರಧಾನ ಅರ್ಚಕರಿಂದ) ಕೊಲೆ ಪ್ರಯತ್ನಗಳಾದವು.

Shri_Ramanujar_pics_2ಹಲವಾರು ವೇದಪಂಡಿತರಲ್ಲಿ ಕಲಿತು, ಅವರ ಸಂಬಂಧಿಯಾದ ಶ್ರೀಶೈಲಪೂರ್ಣನಿಂದ ತಿರುಮಲದಲ್ಲಿ ರಾಮಾಯಣವನ್ನು ಅಭ್ಯಸಿಸಿದರು. ಗೋವಿಂದರಾಜನ ಮೂರ್ತಿಯನ್ನು ಗೋವಿಂದರಾಜಪುರ ( ಈಗಿನ ತಿರುಪತಿ)  ದಲ್ಲಿ ಸ್ಥಾಪಿಸಿದರು. ಈಗೊಮ್ಮೆ ಆಗೊಮ್ಮೆ ನಡೆಯುತ್ತಿದ್ದ, ಸದಾ ಮಂಕುಕವಿದಂತೆ ಇರುತ್ತಿದ್ದ ಪೂಜಾಕ್ರಮಗಳಿಗೆ ಮೆರಗುಕೊಟ್ಟವರೇ ರಾಮಾನುಜರು. ಅವುಗಳಲ್ಲಿ ಮೊದಲನೆಯದು ತಿರುಮಲದ ವೆಂಕಟರಮಣ ಮತ್ತು ಆದಿವರಾಹಗಳ ಪೂಜೆ. ಪೂಜೆಗಳನ್ನು ಹಬ್ಬಗಳಂತೆ, ಉತ್ಸವಗಳಂತೆ ಆಚರಿಸಿ, ದೈವಿಕ ಅನುಭೂತಿಯನ್ನು ಪಡೆಯಬೇಕೆಂಬ ಉದ್ದೇಶದಿಂದ ಆರಂಭಿಸಿದ್ದೇ ಭಾಗಸವಾರಿ ಉತ್ಸವ, ತಣ್ಣೀರ ಮಧು ಉತ್ಸವ.  ಭೂವರಾಹಸ್ವಾಮಿಗೆ ಪ್ರಥಮಪೂಜೆ, ಪ್ರಥಮ ನೈವೇದ್ಯ ಮತ್ತು ಪ್ರಥಮ ದರ್ಶನದಂಥ ಸಂಪ್ರದಾಯವನ್ನು ಆರಂಭಿಸಿದ್ದೂ ಇವರೇ. ವೆಂಕಟರಮಣ, ಸಾಲಿಗ್ರಾಮದ ರೂಪದಲ್ಲಿ ಶಿಲೆಯಾಗಿ ತಿರುಪತಿಯಲ್ಲಿ ಕುಳಿತಾದ ಮೇಲೆ ವಿಖಾನಸ ಮಹರ್ಷಿಯ ರೂಪದಲ್ಲಿ ಮಾನವನಾಗಿ ಜನಿಸಿದ್ದಾನೆಂಬುದು ರಾಮಾನುಜರ ನಂಬಿಕೆಯಾಗಿತ್ತು. ಆದ್ದರಿಂದ ತಿರುಮಲದಲ್ಲಿ ವೆಂಕಟರಮಣನ ಪೂಜೆ ವೈಖಾನಸ ಸಂಪ್ರದಾಯದ ಪ್ರಕಾರವೇ ನಡೆಯಬೇಕೆಂದು ತೀರ್ಮಾನಿಸಿದ್ದರು.

ಇವರು ತಿರುವನಂತಪುರಂ, ದ್ವಾರಕಾ, ಮಥುರಾ, ಬೃಂದಾವನ, ಸಾಲಿಗ್ರಾಮ, ಸಾಕೇತಾ, ಬದರಿಕಾಶ್ರಮ, ನೈಮಿಷಾರಣ್ಯ, ಪ್ಪುಷ್ಕರಗಳಲ್ಲೆಲ್ಲ ತಿರುಗಾಡಿ, ತಮ್ಮ ಜ್ಞಾನವನ್ನು ಹಂಚಿದರು. ಕರ್ನಾಟಕದ ಮೇಲು ಕೋಟೆಯಲ್ಲೂ ಚೆಲುವನಾರಾಯಣನನ್ನು ಪುನರ್ಪ್ರತಿಷ್ಠಾಪಿಸಿದ್ದು ಇವರೇ. ಅಂಥಾ ಕಟ್ಟಾಸಂಪ್ರದಾಯದ ಮಧ್ಯೆಯೂ ವರ್ಷದ ಕನಿಷ್ಟ ಮೂರು ದಿನ ಚೆಲುವನಾರಾಯಣನ ದರ್ಶನ ಅಸ್ಪೃಶ್ಯರಿಗೆ  ಸಿಗುವಂತೆ ನೋಡಿಕೊಂಡರು.  ಮೇಲುಕೋಟೆಯಲ್ಲಿ ಸಾಕಷ್ಟು ದಿನಗಳಿದ್ದು, ತಮಿಳುನಾಡಿನ ಶ್ರೀರಂಗಂನಲ್ಲಿ ತಮ್ಮ ಜೀವನದ ಕೊನೆಯ ಅರವತ್ತು ವರ್ಷಗಳನ್ನು ಕಳೆದು, ತಮ್ಮ ನೂರಿಪ್ಪತ್ತನೇ (೧೧೩೭) ವಯಸ್ಸಿನಲ್ಲಿ ಅಲ್ಲಿಯೇ ಕೊನೆಯುಸಿರನ್ನೆಳೆದರು.

ಇಳಯವಾರುಲು , ರಾಮಾನುಜ, ರಾಮಾನುಜನಾಂಬಿ, ಯತಿರಾಜ, ಲಕ್ಷ್ಮಣಮುನಿ, ಗೋದಗ್ರಜಾರ, ತಿರುಪ್ಪಾವೈಕೊಯ್ಲಣ್ಣನ್, ಭೂತಪುರುಷ, ದೇಸಿಕೇಂದ್ರ, ಎಂಬೆರುಮಣ್ಣಾರ, ಭಾಷ್ಯಕಾರ, ಉದಯವರುಲು ಮುಂತಾದವೆಲ್ಲ ರಾಮಾನುಜಾಚಾರ್ಯರಿಗೆ ಇರುವ ಹೆಸರುಗಳೇ! ಇವುಗಳಲ್ಲಿ ದೇಸಿಕೇಂದ್ರ ಎಂದು ಸ್ವಯಂಭಗವಾನ್ ವಿಷ್ಣು ಕರೆದಿದ್ದರೆ, ಭಾಷ್ಯಕಾರ ಅಂತ ಕಾಶ್ಮೀರದ ವಾಗ್ದೇವಿಯೂ, ಉದಯವರುಳು ಅಂತ ರಂಗನಾಥಸ್ವಾಮಿಯೂ (ರಾಮಾನುಜರು ‘ಗದ್ಯತ್ರಯಂ’ ಬರೆದ ಮೇಲೆ) ಕರೆದಿದ್ದಾರೆ೦ಬುದು ನಂಬಿಕೆ.

ರಾಮಾನುಜಾಚಾರ್ಯರು ವೆಂಕಟರಮಣನ ಗುರುವಿನ ಸ್ಥಾನದಲ್ಲಿದ್ದವರು ಎಂಬ ನಂಬಿಕೆಯಿದೆ. ಆದ್ದರಿಂದ, ಹಬ್ಬ ಮತ್ತು ಉತ್ಸವಗಳಲ್ಲಿ ಮತ್ತು ಧಾರ್ಮಿಕ ಸಮಾರಂಭಗಳಲ್ಲಿ, ತಿಮ್ಮಪ್ಪನ ಜೊತೆಗೆ ರಾಮಾನುಜರಿಗೂ ಪೂಜೆ ಸಲ್ಲಿಸಲಾಗುತ್ತದೆ. ರಾಮಾನುಜಾಚಾರ್ಯರ ಸಹಸ್ರ ಜನ್ಮ ಮಹೋತ್ಸವವು ೨೦೧೭ನೇ ವರ್ಷದಲ್ಲಿ ಬರುವುದರಿಂದ, ತಿರುಪತಿ ತಿರುಮಲ ದೇವಸ್ಥಾನಂ ಟ್ರಸ್ಟ್ (TTD), ಇಡೀ ವರ್ಷ ಸಂಭ್ರಮಾಚರಣೆಯಲ್ಲಿ ತೊಡಗುತ್ತಿದೆ. ಮೇ ೧೦ರಿಂದ ಪ್ರಾರಂಭವಾಗುವ ಕಾರ್ಯಕ್ರಮಗಳು ೨೦೧೭ರ ಮೇ ೧೦ರವರೆಗೂ ನಡೆಯುತ್ತವೆ. TTD ಯ ಈ ವಿಶೇಷ ಕಾರ್ಯಕ್ರಮಗಳಲ್ಲಿ ‘ರಾಮಾನುಜ ಸಂಚಾರಂ’ ತುಂಬಾ ಪ್ರಮುಖವಾದುದು. ಇದರ ಪ್ರಕಾರ, ಮಲಯಪ್ಪಸ್ವಾಮಿ, ಶ್ರೀದೇವಿ, ಭೂದೇವಿ ಮತ್ತು ರಾಮಾನುಜಾಚಾರ್ಯರ ಉತ್ಸವ ಮೂರ್ತಿಗಳನ್ನು ಹೊತ್ತ, ವಿಶೇಷವಾಗಿ ಅಲಂಕೃತಗೊಂಡ ತೇರು, ವರ್ಷದಲ್ಲಿ ದೇಶದ ೧೦೬ ವೈಷ್ಣವ ದಿವ್ಯದೇಸಂಗಳಲ್ಲಿ ಸಂಚರಿಸುತ್ತದೆ.

Related posts

One thought on “ರಾಮಾನುಜಾಚಾರ್ಯ- ಕಲಿಯುಗದ ಲಕ್ಷ್ಮಣ

  1. prashant

    Simply the best, infact namag bari dvaita siddhant ashte arvittu, vishishtadvaita pratipadkarad ramanujachar vidvattada bagge ariviralilla, thank you santosh

Leave a Comment