ಅಮೆರಿಕಾದ ಮೊಗ್ಗು… ತಿರುಪತಿಯಲ್ಲಿ ಅರಳಿತು…

 

ದಿವ್ಯಾ ದೊಮ್ಮರಾಜು. 14 ವರ್ಷದ ಈಕೆ, ಹುಟ್ಟಿ ಬೆಳೆದದ್ದೆಲ್ಲಾ ಅಮೆರಿಕಾದಲ್ಲೇ. ಟೆನ್ನಿಸ್ ನಲ್ಲಿ ಇಂಟರ್ ಸ್ಕೂಲ್ ಚಾಂಪಿಯನ್. ಪೇಂಟಿಂಗ್ ನಲ್ಲೂ ದಿವ್ಯಾ, ಒಳ್ಳೇ ಹೆಸರು ಮಾಡಿದ್ದಾಳೆ. ಮುಂದಿನ ತಿಂಗಳು, ದಿವ್ಯಾ ಹತ್ತನೇ ತರಗತಿಗೆ ಎಂಟ್ರಿ ಪಡೆಯುತ್ತಾಳೆ. ಆದ್ರೆ, ದಿವ್ಯಾಗೆ ನಿತ್ಯವೂ ಏನೋ ಕೊರಗು. ತಮ್ಮ ಹುಟ್ಟೂರಿನ ಬಗ್ಗೆ, ಪ್ರತಿದಿನವೂ ಕನಸು, ಅದೇ ಕನವರಿಕೆ.ದಿವ್ಯಾಳ ತಂದೆ ಉದಯ್ ದೊಮ್ಮರಾಜು, ಎಸ್.ವಿ.ಯು ಇಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿ. ಬಹಳ ವರ್ಷಗಳ ಹಿಂದೆಯೇ ಅಮೆರಿಕಾಗೆ ಹೋಗಿ ನೆಲೆಸಿದ್ದಾರೆ. ಅಮೆರಿಕಾಗೆ ಹೋದರೂ, ಹುಟ್ಟೂರು ತಿರುಪತಿಯ ನಂಟು ಬಿಟ್ಟಿಲ್ಲ. ಅಮೆರಿಕಾದ ಸಂಸ್ಕೃತಿಯ ನಡುವೆಯೇ ಬೆಳೆದರೂ, ದಿವ್ಯಾಗೆ ಭಾರತೀಯ ಪರಂಪರೆ, ಸಂಪ್ರದಾಯದ ಬಗ್ಗೆ ಅಪಾರ ಗೌರವ. ಹೀಗಾಗೇ, ಅಮೆರಿಕಾದಲ್ಲೇ ಭರತನಾಟ್ಯಂ ಕಲಿತಿದ್ದಾಳೆ.

ಅದೆಷ್ಟೇ ಕಷ್ಟವಾದರೂ ಸರಿಯೇ. ತನ್ನ ಭರತನಾಟ್ಯಂ ರಂಗಪ್ರವೇಶ, ತಿರುಪತಿಯಲ್ಲೇ, ಅದೂ ತಿಮ್ಮಪ್ಪನ ಪಾದಾರವಿಂದಗಳಲ್ಲೇ ಆಗಬೇಕು ಎಂಬುದು ದಿವ್ಯಾಳ ಕನಸು. ಮಗಳ ಕನಸಿಗೆ ಉದಯ್ ದೊಮ್ಮರಾಜು ಸಹಾ ನೀರೆರದಿದ್ದಾರೆ. ಆದ್ರೆ, ಹತ್ತನೇ ತರಗತಿಯ ಹೊಸ್ತಿಲಲ್ಲಿ, ಇರುವಾಗ, ಹೇಗಪ್ಪಾ, ಭಾರತಕ್ಕೆ ಹೋಗಿ, ಅದೂ ತಿರುಪತಿಯಲ್ಲಿ ಭರತನಾಟ್ಯಂ ಪ್ರದರ್ಶನ ಏರ್ಪಡಿಸುವುದು ಎಂಬ ಚಿಂತೆ ಕಾಡುತ್ತಿತ್ತು.

ಕೆಲವು ದಿನಗಳ ಹಿಂದೆ, ದಿವ್ಯಾಳ ಕನಸು ನನಸಾಗುವ ಹಂತಕ್ಕೆ ಬಂತು. ತಿಮ್ಮಪ್ಪನ ಸನ್ನಿಧಿಯಲ್ಲೇ, ಭರತನಾಟ್ಯಂ ರಂಗಪ್ರವೇಶ ಮಾಡುವ ಆಕೆಯ ಬಯಕೆ ಈಡೇರುವ ದಿನ ಹತ್ತಿರ ಬಂದಿತ್ತು. ಭಾನುವಾರ ಸಂಜೆ, ತಿರುಪತಿಯಲ್ಲಿ, ದಿವ್ಯಾ ದೊಮ್ಮರಾಜು ರಂಗಪ್ರವೇಶ ಕಾರ್ಯಕ್ರಮವೂ ನಡೆಯಿತು. ಖ್ಯಾತ ಭರತನಾಟ್ಯಂ ಕಲಾವಿದೆ ಮಂಜು ಭಾರ್ಗವಿ ಸೇರಿದಂತೆ, ಆಂಧ್ರಪ್ರದೇಶದ ಖ್ಯಾತ ಭರತನಾಟ್ಯಂ ಕಲಾವಿದರೆಲ್ಲಾ ಅಲ್ಲಿ ಸೇರಿದ್ದರು. 14 ವರ್ಷದ ದಿವ್ಯಾಳ ಭರತನಾಟ್ಯಂ ಪ್ರಾವೀಣ್ಯತೆ ಕಂಡು, ಎಲ್ಲರೂ ಮೆಚ್ಚಿದರು. ಮನಸಾರೆ ಹರಸಿದರು.

ಈಗ ದಿವ್ಯಾಳಿಗೆ ನಾದ ನಿರಂಜನಂ ಬಗ್ಗೆ ಕನವರಿಕೆ ಶುರುವಾಗಿದೆ. ನಾದ ನಿರಂಜನಂ, ಟಿಟಿಡಿ ವತಿಯಿಂದ ನಡೆಸಲ್ಪಡುವ ಕಾರ್ಯಕ್ರಮ. ಪ್ರಮುಖ ಪೂಜಾ ದಿನಗಳಂದು, ಟಿಟಿಡಿ ವತಿಯಿಂದ ಸಾಂಪ್ರದಾಯಿಕ ನೃತ್ಯಗಳನ್ನ ಏರ್ಪಡಿಸುತ್ತದೆ. ಈ ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರದರ್ಶನ ನೀಡಬೇಕೆಂಬುದು ದಿವ್ಯಾಳ ಈಗಿನ ಕನಸು. ಅಮೆರಿಕಾದಿಂದ ಬಂದು, ತಿರುಪತಿಯಲ್ಲಿ ರಂಗಪ್ರವೇಶಕ್ಕೆ ಅವಕಾಶ ಕೊಟ್ಟ, ತಿಮ್ಮಪ್ಪ, ಅವನ ಸನ್ನಿಧಿಯಲ್ಲೂ ಅವಕಾಶ ಕೊಡುತ್ತಾನೆಂಬ ನಂಬಿಕೆ, ಭಕ್ತಿ ದಿವ್ಯಾಳದ್ದು.

divya bharatanatyam

 Related posts

Leave a Comment