ಬಾಲಾಜಿ ಸೇವೆ : ಕಾಂಚಿಪುರಂ ಅರಸರಿಂದ ಕೃಷ್ಣದೇವರಾಯನವರೆಗೂ …

ತಿರುಪತಿ ತಿಮ್ಮಪ್ಪನಿಗೆ ನಡೆದುಕೊಂಡ ರಾಜ ಸಂಸ್ಥಾನಗಳು ಅಪಾರ. ಹಲವು ರಾಜ, ಮಹಾರಾಜರು, ಶ್ರೀನಿವಾಸನ ಸೇವೆಗೆ ತಮ್ಮನ್ನ ಸಮರ್ಪಿಸಿಕೊಂಡಿದ್ದಾರೆ. 9ನೇ ಶತಮಾನದಲ್ಲಿ ಕಾಂಚಿಪುರ ಅರಸರು, ತಿರುಪತಿ ತಿಮ್ಮಪ್ಪನ ಸೇವೆ ಮಾಡಿದ್ದಾರೆ. ತಿಮ್ಮಪ್ಪನಿಗೆ ಕಾಂಚಿಪುರಂ ಸಂಸ್ಥಾನ, ಶ್ರದ್ಧೆ, ಭಕ್ತಿಯಿಂದ ನಡೆದುಕೊಂಡಿದೆ. ಇದಾದ ಬಳಿಕ, 10ನೇ ಶತಮಾನದಲ್ಲಿ, ಚೋಳ ರಾಜರು, ಶ್ರೀ ಸೇವೆಯಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದರು. ಇದೇ ವೇಳೆ, ತಂಜಾವೂರು ಸಂಸ್ಥಾನದ ಒಡೆಯರೂ, ವೆಂಕಟೇಶ್ವರನ ಸೇವೆ ಮಾಡಿದ್ದಾರೆ. ಆದ್ರೆ, ತಿರುಪತಿ, ಬಹಳ ಉಚ್ಛ್ರಾಯ ಸ್ಥಿತಿಗೆ ತಲುಪಿದ್ದು 15ನೇ ಶತಮಾನದಲ್ಲಿ.ವಿಜಯನಗರ ಅರಸ ಶ್ರೀಕೃಷ್ಣದೇವರಾಯನ ಕಾಲದಲ್ಲಿ. ಶ್ರೀಕೃಷ್ಣದೇವರಾಯ, ತಿಮ್ಮಪ್ಪನಿಗಾಗಿ, ತನ್ನನ್ನೇ ಮುಡಿಪಾಗಿಟ್ಟ ದೊರೆ. ಕಾಲ ಕಾಲಕ್ಕೆ, ತಿರುಪತಿಗೆ ಧನ, ಕನಕಾಧಿಗಳನ್ನ ಯತೇಚ್ಛವಾಗಿ ದಾನ ನೀಡಿದ ದೊರೆ ಶ್ರೀಕೃಷ್ಣದೇವರಾಯ. ವಜ್ರ, ವೈಢೂರ್ಯ, ಚಿನ್ನಾಭರಣಗಳನ್ನ ತಿಮ್ಮಪ್ಪನ ಪಾದಾರವಿಂದಗಳಿಗೆ ಸಮರ್ಪಿಸಿದ.

ಕೃಷ್ಣದೇವರಾಯನ ಕಾಲದಲ್ಲೇ, ತಿರುಪತಿಯ ಹೆಸರು, ಜಗಜ್ಜಾಹೀರಾಯ್ತು. ತಿರುಪತಿ ತಿಮ್ಮಪ್ಪನ ದೇವಾಲಯದ ಸ್ವರ್ಣಗೋಪುರ ನಿರ್ಮಾಣವಾದದ್ದೂ, ಕೃಷ್ಭದೇವರಾಯ ಸಮರ್ಪಿಸಿದ ಚಿನ್ನದಿಂದಲೇ. ಶ್ರೀಕೃಷ್ಣದೇವರಾಯ, ತಿಮ್ಮಪ್ಪನನ್ನು ಅದೆಷ್ಟು ಆರಾಧಿಸುತ್ತಿದ್ದ ಎಂಬುದಕ್ಕೆ ಇದೊಂದು ಸಣ್ಣ ನಿದರ್ಶನ. ಶ್ರೀಕೃಷ್ಣದೇವರಾಯನ ಅಪಾರ ಭಕ್ತಿಯಿಂದಾಗಿಯೇ, ಈಗಲೂ, ಕೃಷ್ಣದೇವರಾಯ ಮತ್ತವನ ಪತ್ನಿಯ ವಿಗ್ರಹ, ತಿಮ್ಮಪ್ಪನ ಗರ್ಭಗುಡಿಯ ಎದುರಿನ ಸ್ವರ್ಣ ಬಾಗಿಲಿನಲ್ಲಿ ಇದೆ.

ವಿಜಯನಗರ ಅರಸರ ಬಳಿಕ, ಮೈಸೂರು ಸಂಸ್ಥಾನದ ಅರಸರೂ, ತಿಮ್ಮಪ್ಪನಿಗೆ ನಡೆದುಕೊಂಡಿದ್ದಾರೆ. ಮಹಾರಾಷ್ಟ್ರದ ಗಡ್ವಾಲ್ ಸಂಸ್ಥಾನವೂ, ಶ್ರೀನಿವಾಸನ ಸೇವೆಯಲ್ಲಿ ನಿರತವಾಗಿತ್ತು. ಇದಾದ ನಂತರ, 1755ರಲ್ಲಿ ಮರಾಠಾ ದೊರೆ, ಮೊದಲನೇ ರಾಜಾಜಿ ಬೋಸ್ಲೆ ಕೂಡಾ, ತಿರುಪತಿಗೆ ಬಂದಿದ್ದರು. ಇವರ ಕಾಲದಲ್ಲೇ, ತಿರುಪತಿಯಲ್ಲಿ ಕ್ರಮಬದ್ಧವಾಗಿ, ನಿತ್ಯವೂ ಪೂಜೆ, ಪುನಸ್ಕಾರಗಳು ನಡೆಯುವ ಆಡಳಿತ ಮಂಡಳಿ ಜಾರಿಗೆ ಬಂತು.

ನಂತರ, ಅಕ್ಬರನ ಕಂದಾಯ ಮಂತ್ರಿಯಾಗಿದ್ದ ರಾಜಾ ತೋದರ್ ಮಲ್ ಕೂಡಾ, ತಿರುಪತಿಗೆ ಆಗಮಿಸಿದ್ದ ಎಂಬುದು ಇತಿಹಾಸದ ಪುಟಗಳಲ್ಲಿದೆ. ಎಷ್ಟೇ ರಾಜರು, ತಿಮ್ಮಪ್ಪನ ಆರಾಧಿಸಿದ್ದರೂ, ಶ್ರೀಕೃಷ್ಣದೇವರಾಯನ ಸೇವೆ, ಶ್ರೀಕೃಷ್ಣದೇವರಾಯನ ಶ್ರದ್ಧೆ, ಭಕ್ತಿಯೇ ಇಂದಿಗೂ, ಜನಮಾನಸದಲ್ಲಿ ರಾರಾಜಿಸುತ್ತಿದೆ.

baalaaji

 Related posts

Leave a Comment