ತಿರುಪತಿಗೆ ಕ್ಲೀನ್ ಸಿಟಿ ಪಟ್ಟ ಮುಡಿಗೇರಿಸಿಕೊಳ್ಳುವ ಹಂಬಲ

ಪ್ರತೀದಿನ, ತಿರುಪತಿಗೆ ಒಂದು ಲಕ್ಷಕ್ಕೂ ಹೆಚ್ಚು ಜನರು ಬರುತ್ತಾರೆ. ತಿಮ್ಮಪ್ಪನ ದರ್ಶನ ಪಡೆಯುವವರೇ, ದಿನವೊಂದಕ್ಕೆ ಒಂದು ಲಕ್ಷ. ಹೀಗೆ ಬಂದು ಹೋಗುವವರ ನಡುವೆಯೂ, ತಿರುಪತಿ ಹಾಗೂ ತಿರುಮಲ, ಬಹಳ ನೈರ್ಮಲ್ಯ ಕಾಪಾಡಿಕೊಂಡು ಬರುತ್ತಿದೆ. ಅಚ್ಚುಕಟ್ಟಾದ ರಸ್ತೆಗಳು, ಪಬ್ಲಿಕ್ ಟಾಯ್ಲೆಟ್ಸ್, ರೈಲು ನಿಲ್ದಾಣ, ಬಸ್ ನಿಲ್ದಾಣಗಳು, ಬೆಟ್ಟದ ಮೆಟ್ಟಿಲುಗಳ ದಾರಿ, ಹೋಟೆಲ್ ಗಳು, ಕಾಫಿ ಟೀ ಅಂಗಡಿಗಳು ಹೀಗೆ ಪ್ರತಿಯೊಂದರಲ್ಲೂ ಅಚ್ಚುಕಟ್ಟು ಬಯಸುತ್ತದೆ. ಇತ್ತೀಚೆಗೆ, ಕೇಂದ್ರ ಸರ್ಕಾರ, ಪ್ರಾಥಮಿಕವಾಗಿ ಪ್ರಕಟಿಸಿದ ದೇಶದ ನೂರು ಕ್ಲೀನ್ ಸಿಟಿಗಳ ಪಟ್ಟಿಯಲ್ಲಿ ತಿರುಪತಿ ಹೆಸರೇ ಇಲ್ಲ. ಇದನ್ನ ಸವಾಲಾಗಿ ಸ್ವೀಕರಿಸಿದೆ ತಿರುಪತಿ ಮುನಿಸಿಪಲ್ ಕಾರ್ಪೋರೇಷನ್. ಸ್ವಚ್ಛ ಸರ್ವೇಕ್ಷಣಾ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿಕೊಳ್ಳಬೇಕೆಂಬ ಹಟ ತಿರುಪತಿಯದ್ದು. ಹೀಗಾಗಿ, ಇಡೀ ತಿರುಪತಿಯನ್ನ ಹಿಂದಿಗಿಂತಲೂ ಹೆಚ್ಚು ಸ್ವಚ್ಛವಾಗಿಡಲು, ಪಾಲಿಕೆ ಶ್ರಮಿಸುತ್ತಿದೆ. ಕ್ಲೀನ್ ಸಿಟಿ ಪಟ್ಟ ಪಡೆಯಲು, ಪ್ರಮುಖವಾಗಿ ಮೂರು ಮಾನದಂಡಗಳನ್ನ ಅಳೆಯಲಾಗುತ್ತದೆ. ಮೊದಲನೆಯದಾಗಿ, ಆಯಾ ಪಾಲಿಕೆಯ ಕಾರ್ಯ ಕ್ಷಮತೆಯನ್ನು ಅಳೆದೂ ತೂಗಲಾಗುತ್ತದೆ. ಅಧಿಕಾರಿಗಳು, ಈ ಬಗ್ಗೆ ನೀಡುವ ಪ್ರಾಜೆಕ್ಟ್ ರಿಪೋರ್ಟ್ ಮುಖ್ಯವಾಗಿರುತ್ತದೆ. ಎರಡನೆಯದಾಗಿ, ನಗರದ 42 ವಿವಿಧ ಸ್ಥಳಗಳಲ್ಲಿ ನೇರವಾಗಿ ಪರಿಶೀಲಿಸಲಾಗುತ್ತದೆ. ಸಾರ್ವಜನಿಕ ಶೌಚಾಲಯ, ಕಸ ನಿರ್ವಹಣೆ, ಕಸದ ಮರು ಬಳಕೆ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳು, ಸಮೂದಾಯ ಭವನಗಳಲ್ಲಿನ ಸ್ವಚ್ಛತೆ, ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆ ಈ ಎಲ್ಲದರ ಚಿತ್ರೀಕರಣ ಮಾಡಲಾಗುತ್ತದೆ. ಮೂರನೆಯದಾಗಿ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹ. ನಗರಕ್ಕೆ ಬಂದು ಹೋಗುವವರ, ಸ್ಥಳೀಯ ನಿವಾಸಿಗಳ ಅಭಿಪ್ರಾಯವನ್ನೂ ಸಂಗ್ರಹಿಸಲಾಗುತ್ತದೆ. ಈ ಮೂರನೇ ಮಾನದಂಡಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಪ್ರತಿಯೊಂದು ನಗರಕ್ಕೂ ಒಟ್ಟು 2000 ( ಎರಡು ಸಾವಿರ ) ಅಂಕಗಳನ್ನ ನೀಡಲಾಗುತ್ತದೆ. 900 ಅಂಕಗಳನ್ನ ಪಾಲಿಕೆಗೂ, 500 ಅಂಕಗಳನ್ನ ನೇರ ವೀಕ್ಷಣೆಗೂ, ಉಳಿದ 600 ಅಂಕಗಳನ್ನ ಸಾರ್ವಜನಿಕರ ಅಭಿಪ್ರಾಯಕ್ಕೆ ನೀಡಲಾಗುತ್ತದೆ. ಯಾವ ನಗರ ಅತೀ ಹೆಚ್ಚು ಅಂಕಗಳನ್ನ ಗಳಿಸುತ್ತದೆಯೋ, ಆ ನಗರಕ್ಕೆ ದೇಶದಲ್ಲೇ ಕ್ಲೀನ್ ಸಿಟಿ ಪಟ್ಟ ಕಟ್ಟಲಾಗುತ್ತದೆ. ಈಗ ಇದೇ ಕನವರಿಕೆಯಲ್ಲಿ, ತಿರುಪತಿ ಪಾಲಿಕೆಯೂ, ಹಗಲಿರುಳೂ ಕೆಲಸ ಮಾಡುತ್ತಿದೆ.

Related posts

Leave a Comment