ತಿರುಪತಿ ಲಡ್ಡಿಗೆ ಎಕ್ಸ್ ಪೇರಿ ಡೇಟ್ ಯಾಕಿರೋಲ್ಲ…! ?

ಹೆಡ್ ಲೈನ್ ನೋಡಿದಾಕ್ಷಣ ತಿಮ್ಮಪ್ಪಾ, ಏನಪ್ಪಾ ಇದೆಲ್ಲಾ ಅಂದುಕೊಂಡಿರುತ್ತೀರಾ ಅಲ್ವಾ. ನೀವು ಅಂದುಕೊಂಡಂತೆಯೇ ಇದೆ, ತಿರುಪತಿ ಲಡ್ಡುವಿನ ಪುರಾಣ. ಸಾಮಾನ್ಯವಾಗಿ ತಿರುಪತಿ ಲಡ್ಡು ಅಂದಾಕ್ಷಣ ಅನಿಸೋದು, ಆ ರುಚಿ, ಆ ಘಮ. ಧಾರ್ಮಿಕ ದೃಷ್ಟಿಯಿಂದ ನೋಡಿದ್ರೆ, ಲಡ್ಡು ಬಹಳ ರುಚಿ, ಬಹಳ ಸುಂದರ. ಕಣ್ಣಿಗೊತ್ತಿಕೊಂಡು, ಒಂದಿಡೀ ಲಡ್ಡುವನ್ನು ಒಬ್ಬರೇ ತಿಂದು ಬಿಡ್ತೇವೆ. ಆದ್ರೆ ವ್ಯಾವಹಾರಿಕ ದೃಷ್ಟಿಯಿಂದ ನೋಡಿದಾಗ, ಹೌದಲ್ಲಾ, ನಾವು  ಹೀಗೂ ಯೋಚಿಸಿರಲಿಲ್ಲವಲ್ಲಾ ಎನಿಸುತ್ತೆ. ಸರಿ, ಈಗ ನೇರ ಆ ವಿವಾದದ ತುಪ್ಪ, ವಂಚನೆಯ ಸಕ್ಕರೆ ವಿಚಾರಕ್ಕೇ ಬರೋಣ. ನೀವು ಯೂ ಟ್ಯೂಬ್ ಆಗಲೀ, ಬೇರೆ ಸಾಮಾಜಿಕ ಜಾಲ ತಾಣದಲ್ಲಾಗಲೀ, ತಿರುಪತಿ ಲಡ್ಡು ತಯಾರಿಕೆ ಬಗ್ಗೆ ನೋಡೇ ಇರುತ್ತೀರಾ.ಲಡ್ಡು ತಯಾರಿಕೆಗಾಗೇ ತಿರುಪತಿಯಲ್ಲಿ ದೊಡ್ಡ ವ್ಯವಸ್ಥೆ ಮಾಡಲಾಗಿದೆ. ಆದ್ರೆ, ಲಡ್ಡು ಕಟ್ತಾರಲ್ಲ, ಅವರನ್ನು ಗಮನಿಸಿದ್ದೀರಾ…? ಅರ್ಧ ಪಂಚೆ ಕಟ್ಟಿಕೊಂಡು, ಮೂರು ನಾಮ ಬಳಿದುಕೊಂಡು, ಅರೆ ಬೆತ್ತಲೆಯಲ್ಲಿ ಬೆವರು ಸುರಿಸುತ್ತಾ, ಲಡ್ಡು ಕಟ್ಟುತ್ತಿರುತ್ತಾರೆ. ಅಬ್ಜೆಕ್ಷನ್ ಬಂದಿರೋದೇ ಇಲ್ಲಿ ಸ್ವಾಮಿ.

hqdefault (1)ಯಾವುದೇ ಒಂದು ಸಾಮಾನ್ಯ ಬೇಕರಿಯಲ್ಲಿ, ಸ್ವೀಟ್ ಸ್ಟಾಲ್ ನಲ್ಲಿ ಯಾವುದೇ ತಿಂಡಿ ತಯಾರು ಮಾಡಿದರೂ, ಅದಕ್ಕೊಂದು ರೂಲ್ಸು ರೆಗ್ಯುಲೇಷನ್ ಇದ್ದೇ ಇರುತ್ತೆ. ಆರೋಗ್ಯ ಇಲಾಖೆಯಿಂದ ಕಾಲ ಕಾಲಕ್ಕೆ ಪರಿಶೀಲನೆ ಆಗುತ್ತಿರುತ್ತದೆ. ಅಡುಗೆ ಮಾಡುವವರ ಸ್ಥಿತಿ ಗತಿಯನ್ನೂ ಲೆಕ್ಕ ಹಾಕಲಾಗುತ್ತೆ. ಆದ್ರೆ, ತಿರುಪತಿಯಲ್ಲಿ ಅದು ಏಕಿಲ್ಲ ಎಂಬುದೇ ಈಗ ಎದ್ದಿರುವ ತಕರಾರು. ತಿರುಪತಿಯಲ್ಲಿ ಲಡ್ಡು ತಯಾರಿಸುವ ಜನರನ್ನೇ ನೋಡಿ, ಮೈಮೇಲೆ ಅಂಗಿಯನ್ನೇ ಹಾಕಿಕೊಂಡಿಲ್ಲ, ಕೈಗೆ ಗ್ಲೌಸ್ ಹಾಕಿಲ್ಲ, ಕೂದಲು ಉದುರದಂತೆ ಪ್ಲಾಸ್ಟಿಕ್ ಟೋಪಿ ಹಾಕಿಕೊಂಡಿಲ್ಲ. ದಿನವಿಡೀ ಬೆವರು ಸುರಿಸುತ್ತಾ, ಮುಖ ಮೂತಿ, ಕಂಕಳು ಕೆರೆದುಕೊಳ್ಳುತ್ತಾ, ಅದೇ ಕೈನಲ್ಲಿ ಲಡ್ಡು ಕಟ್ಟುತ್ತಾರೆ.
ಹೀಗೆ ಲಡ್ಡು ಕಟ್ಟುವವರ ಅವತಾರವೆಲ್ಲಾ ಹೀಗೇ ಇರುತ್ತೆ. ಆದ್ರೆ, ಇಲ್ಲಿ ಯಾವುದೇ ಆಹಾರ ಸುರಕ್ಷತಾ ಕ್ರಮ ಏಕೆ ಕೈಗೊಂಡಿಲ್ಲ ಎಂಬುದೇ ಆ ವಿವಾದಿತ ತುಪ್ಪ. ಇನ್ನು, ಲಡ್ಡು ತಯಾರಿಕೆಯ ಸ್ಥಳವನ್ನ ಕಾಲ ಕಾಲಕ್ಕೆ ಯಾರಾದರೂ  ಪರಿಶೀಲಿಸುತ್ತಿದ್ದಾರಾ..? ಅಲ್ಲಿನ ಸ್ವಚ್ಛತೆಯ ಬಗ್ಗೆ ಗಮನ ಕೊಟ್ಟಿದ್ದಾರಾ ಎಂಬ ಪ್ರಶ್ನೆಯೂ ಬರುತ್ತೆ. ಗಮನ ಕೊಟ್ಟಿದ್ದೇ ಆದಲ್ಲಿ, ತಿರುಪತಿ ಲಡ್ಡುವಿನಲ್ಲಿ, ಕೂದಲು ಸಿಕ್ಕುತ್ತಿರಲಿಲ್ಲ. ನಟ್ಟು ಬೋಲ್ಟುಗಳೂ ಸಿಗುತ್ತಿರಲಿಲ್ಲ, ಗಾಜಿನ ತುಂಡು ಸಿಕ್ಕುತ್ತಲೇ ಇರಲಿಲ್ಲ. ಇನ್ನೂ ಬೇಸರದ ವಿಷಯವೆಂದ್ರೆ, ತಿರುಪತಿ ಲಡ್ಡುವಿನಲ್ಲಿ ಗುಟ್ಕಾ ಚೀಟಿಗಳೂ ಸಿಗುತ್ತಿರಲಿಲ್ಲ. ತಿರುಪತಿಗೆ ಒಂದು ದಿನಕ್ಕೆ ಹತ್ತಿರತ್ತಿರ ಒಂದು ಲಕ್ಷ ಭಕ್ತಾದಿಗಳು ಭೇಟಿ ಕೊಡ್ತಾರೆ. ಒಬ್ಬರಿಗೆ ಕನಿಷ್ಟ ಒಂದು ಲಾಡೆಂದರೂ, ದಿನಕ್ಕೆ ಒಂದು ಲಕ್ಷ ಲಾಡು ಮಾರಾಟ ಆಗುತ್ತೆ. ಇದು, ಕನಿಷ್ಟ ಪ್ರಮಾಣವಷ್ಟೇ. ಹೀಗೆ ತಯಾರಾಗುವ ಲಾಡನ್ನು, ಪುಗಸಟ್ಟೆಯಾಗಂತೂ ನೀಡೋದಿಲ್ಲ. ಅದಕ್ಕೂ ಬೆಲೆ ಇದ್ದೇ ಇದೆ ಅಲ್ವಾ. ಕಾಸಿಗೆ ತಕ್ಕಂತೆ ಕಜ್ಜಾಯ ಎಂಬಂತೆ, ಪೂಜೆಗೆ ತಕ್ಕಂತೆ ಲಡ್ಡು. ಒಂದೊಂದು ಪೂಜೆಗೂ ಒಂದೊಂದು ರೀತಿಯ ಬೆಲೆ.

A photo of teams of priests making Tirupati laddu at Temple kitchen.
ಇರಲಿ ಬಿಡಿ, ಇದು ಅವರವರ ಭಕುತಿ, ಅವರವರ ಭಾವಕ್ಕೆ ಸಂಬಂಧಿಸಿದ್ದು. ಆದ್ರೆ, ಇಷ್ಟೊಂದು ದೊಡ್ಡ ಮಟ್ಟದಲ್ಲಿ ಲಡ್ಡು ಮಾರಾಟ ಮಾಡುವ ಟಿಟಿಡಿ, ಅಂದ್ರೆ, ತಿರುಪತಿ ತಿರುಮಲ ದೇವಸ್ಥಾನಂ ಟ್ರಸ್ಟ್, ಅದಕ್ಕೆ ಲೈಸನ್ಸ್ ತೆಗೆದುಕೊಂಡಿದೆಯಾ ಎಂಬುದು..? ಜೊತೆಗೆ ಸೇಲ್ಸ್ ಟ್ಯಾಕ್ಸ್, ಸರ್ವೀಸ್ ಟ್ಯಾಕ್ಸ್ ಕಟ್ಟುತ್ತಿದೆಯಾ ಎಂಬುದು..? ಇದಕ್ಕಿಂತಲೂ ಮುಖ್ಯವಾಗಿ, ತಿರುಪತಿ ಲಡ್ಡುವಿಗೆ ಪ್ಯಾಕ್ ಮಾಡೋದಿಲ್ಲ. ಪ್ಯಾಕೇ ಇಲ್ಲದ ಮೇಲೆ, ಅದಕ್ಕೆ ಎಕ್ಸ್ ಪೇರಿ ಡೇಟ್ ಎಲ್ಲಿರಬೇಕು…? ಇದೂ ಕೂಡಾ ಈಗ ವಿವಾದ ಉಂಟಾಗಲು ಕಾರಣ. ಒಂದು ರೂಪಾಯಿ ಚಾಕೊಲೇಟ್ ಗೂ ಒಂದು ಎಕ್ಸ್ ಪೇರಿ ಡೇಟ್ ಹಾಕಲೇಬೇಕು, ಇದು ಸಹಜ ಕೂಡಾ. ಆದ್ರೆ, ತಿರುಪತಿ ಲಡ್ಡುವಿಗೇಕೆ ಎಕ್ಸ್ ಪೇರಿ ಡೇಟ್ ಇರೋದಿಲ್ಲ. ಅಯ್ಯೋ, ಹೌದಲ್ವಾ..! ಇದರಲ್ಲೂ ಒಂದು ಲಾಜಿಕ್ ಇದೆ ಅನಿಸುತ್ತೆ ಅಲ್ವಾ. ಇಷ್ಟೇ ಅಲ್ಲ, ತಿರುಪತಿ ಲಡ್ಡುವನ್ನ ಒಂದು ದೊಡ್ಡ ರೂಂನಲ್ಲಿ ಗುಡ್ಡೆ ಗುಡ್ಡೆ ಹಾಕಿಡಲಾಗುತ್ತೆ. ಆಹಾರ ಸುರಕ್ಷತಾ ಕ್ರಮಗಳು ಇಲ್ಲಿ ಏಕಿಲ್ಲ ಎಂಬುದೂ ಈಗ ಎದ್ದಿರುವ ಪ್ರಶ್ನೆ. ಇದನ್ನೇ ವಂಚನೆಯ ಸಕ್ಕರೆ ಎಂದದ್ದು. ಈ ಪ್ರಶ್ನೆ ಈಗ ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿದೆ.

narasimha-murthy-inತಿರುಪತಿ, ಇಡೀ ವಿಶ್ವದಲ್ಲೇ ಎರಡನೇ ಅತೀ ದೊಡ್ಡ ಶ್ರೀಮಂತ ದೇವಾಲಯ. ವರ್ಷಕ್ಕೆ ಒಂದೂವರೆ ಸಾವಿರ ಕೋಟಿ ರೂಗೂ ಅಧಿಕ ಆದಾಯ ಬರುತ್ತೆ. ಅಂತಹದ್ದರಲ್ಲಿ, ಒಂದು ಆಹಾರ ಸುರಕ್ಷತಾ ಕ್ರಮ ತೆಗೆದುಕೊಳ್ಳೋಕೆ ಆಗೋಲ್ವೇ..? ಲಡ್ಡು ಕಟ್ಟುವವರಿಗೆ ಕೈಗ್ಲೌಸ್ ಕೊಡಿಸೋಕೆ ಆಗೋಲ್ವೇ..? ಅವರು ಕೈನ ಉಗುರು ಕಟ್ ಮಾಡಿದ್ದಾರೋ, ಇಲ್ಲವೋ ಎಂಬುದನ್ನ ಯಾರಾದ್ರೂ ಗಮನಿಸ್ತಾ ಇದ್ದಾರಾ..? ಇದೆಲ್ಲವೂ ಸಾಮಾನ್ಯ ಎನಿಸಿದರೂ, ನಿಜಕ್ಕೂ ಇದು ದೊಡ್ಡ ಪ್ರಮಾದ. ಹೀಗಾಗೇ, ಈ ಪ್ರಶ್ನೆ ಪ್ರಧಾನಿಯವರ ಮುಂದಿದೆ. ಇಲ್ಲಿ ಆಹಾರ ಸುರಕ್ಷತಾ ಕ್ರಮಗಳನ್ನ ಗಾಳಿಗೆ ತೂರಲಾಗಿದೆ. ಒಂದು ಸಣ್ಣ ಬೇಕರಿಗೆ ದೊಡ್ಡ ಫೈನ್ ಹಾಕುವ ಮಂದಿ, ಇದೇ ತಿರುಪತಿಯಲ್ಲಿ, ಇಷ್ಟೆಲ್ಲಾ ಆಗುತ್ತಿದ್ದರೂ, ಕೇಳೋದಿಲ್ಲ. ಉದ್ದುದ್ದ, ಅಡ್ಡಡ್ಡ ಬಿದ್ದು ಸಾಷ್ಟಾಂಗ ನಮಸ್ಕಾರ ಹಾಕಿ ಬರುತ್ತಾರೆ.  ಮೋದಿ ಅವರೀಗ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡುಬಿಟ್ಟಿದ್ದಾರೆ. ಹೇಗಪ್ಪಾ ಇದನ್ನು ಸಾಲ್ಸ್ ಮಾಡೋದು ಅಂತಾ. ಅಂದ್ಹಾಗೆ, ಇಷ್ಟೆಲ್ಲಾ ಪ್ರಶ್ನೆಗಳನ್ನ ಹಾಕಿರುವುದು ಬೆಂಗಳೂರಿನವರೇ. ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ. ಎಲ್ಲಾ ಸಾಧ್ಯತೆಗಳ ಬಗ್ಗೆ ಯೋಚಿಸಿಯೇ ತಕ್ಕ ಸಾಕ್ಷ್ಯಗಳನ್ನೂ ಕಲೆ ಹಾಕಿಯೇ ಈ ಎಲ್ಲಾ ತಕರಾರುಗಳನ್ನೂ ಎತ್ತಿದ್ದಾರೆ ನರಸಿಂಹಮೂರ್ತಿ. ಹೀಗಾಗೇ, ಕಟ್ಟ ಕಡೆಗೆ, ಒಂದು ಯೋಚನೆ ನಮ್ಮ ಮುಂದೆ ನಿಲ್ಲುತ್ತೆ. ತಿರುಪತಿಗೆ ಬಳಸುತ್ತಿರುವುದು ವಿವಾದದ ತುಪ್ಪ, ವಂಚನೆಯ ಸಕ್ಕರೆ ಎಂಬುದೇ ಆ ಯೋಚನೆ. ಪ್ರಶ್ನಿಸುವವರು ದೆಹಲಿಯಲ್ಲಿದ್ದಾರೆ.

O SureshRelated posts

Leave a Comment