ಪರಂಗಿಯವರೂ ತಿಮ್ಮಪ್ಪನ ಪರಮ ಭಕ್ತರೇ

ಸುಮಾರು 250ಕ್ಕೂ ಹೆಚ್ಚು ವರ್ಷಗಳ ಕಾಲ ಭಾರತವನ್ನಾಳಿದ ಬ್ರಿಟೀಷರು ಕೂಡ ಶ್ರೀನಿವಾಸನ ಸೇವೆ ಮಾಡಿದ್ದಾರೆ.ಬ್ರಿಟೀಷರ ಆಡಳಿತಾವಧಿಯಲ್ಲಿ ತಿರುಮಲ ಬೆಟ್ಟದಲ್ಲಿ ಅನೇಕ ಕಟ್ಟಡಗಳಿಗೆ ಭದ್ರ ಬುನಾದಿಗಳು ಬಿದ್ದಿವೆ. ಕಠಿಣ ಕಾನೂನುಗಳು, ಕಟ್ಟುನಿಟ್ಟಿನ ಕ್ರಮಗಳು ಜಾರಿಯಾಗಿವೆ. ಇಂದಿಗೂ ಟಿಟಿಡಿ ಆಡಳಿತ ವೈಖರಿಯಲ್ಲಿ ಬ್ರಿಟೀಷರ ಆಡಳಿತದ ಕುರುಹುಗಳು ಕಾಣಸಿಗುತ್ತವೆ.

ಅಂದು ಬ್ರಿಟೀಷರು ಜಾರಿಗೆ ತಂದಂತಹ ಬ್ರಿಟೀಷ್ ಬ್ರೂಸ್ ಕೋಡ್ ಇಂದಿಗೂ ಟಿಟಿಡಿಗೆ ದಿಕ್ಸೂಚಿಯಂತೆ ಇದೆ. ಸುಮಾರು 43 ವರ್ಷಗಳ ಕಾಲ ಬ್ರಿಟೀಷ್  ಈಸ್ಟ್ ಇಂಡಿಯಾ ಕಂಪೆನಿಯ ಕೋರ್ಟ್ ಆಫ್ ಡೈರೆಕ್ಟರ್ಸ್ ಉತ್ತರ ಜಿಲ್ಲೆಯ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಟಿಟಿಯ ಆಡಳಿತ ನಡೆದಿದೆ. ಈ ಸಂದರ್ಭದಲ್ಲಿ  ದೇವಸ್ಥಾನದ ಅರ್ಚಕರು, ಜಿಯರ್ ಗಳು, ಸಿಬ್ಬಂದಿ ನಡುವೆ ಪರಸ್ಪರ ಅಸಮಾಧಾನ ಇತ್ತು ಎಂದು ಇತಿಹಾಸದಿಂದ ತಿಳಿದು ಬರುತ್ತದೆ. ಈ ಸಂದರ್ಭದಲ್ಲಿ ಬ್ರೀಟಿಷ್ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದು ಆಡಳಿತವನ್ನು ಹಿಡಿತದಲ್ಲಿ ಇಟ್ಟುಕೊಂಡಿತ್ತು ಎಂದು ಹೇಳಲಾಗಿದೆ.

ಅಂದಿನ ಆರ್ಕಾಟ್ ಜಿಲ್ಲೆಯ ಮೊದಲ ಬ್ರಿಟೀಷ್ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿದ ಕಲೆಕ್ಟರ್ ಸ್ಟ್ರಾಟನ್ ಅವರು ದೇವಸ್ಥಾನಕ್ಕೆ ಸಂಬಂಧಿಸಿದ ವಿಸ್ತೀರ್ಣ, ಸಿಬ್ಬಂದಿಗಳ ಹುದ್ದೆ, ವೇತನ, ಜೀತಭತ್ಯೆ, ನೈವೇದ್ಯ, ಆರ್ಜಿತ ಸೇವೆಗಳ ಕುರಿತು ಹೆಚ್ಚು ಅಧ್ಯಯನ ಮಾಡಿದ್ದರು. ಈ ಕುರಿತು 1830 ಜನವರಿ 31ರಂದು  ಮದ್ರಾಸ್ ಈಸ್ಟ್ ಇಂಡಿಯಾ ಕಂಪೆನಿಗೆ ಒಂದು ಅಧ್ಯಯನದ ವರದಿಯನ್ನು ಸಹ ಅವರು ನೀಡಿದ್ದರು. ಇವರ ನಂತರ ತಿರುಮಲ ದೇವಸ್ಥಾನದ  ಆಡಳಿತ ಮಂಡಳಿ ಅಧ್ಯಕ್ಷರಾಗಿ ವಿ ಬ್ರೂಸ್ ಅವರು ನೇಮಕವಾದರು.

ಆಡಳಿತ ಸುಧಾರಣೆಗಾಗಿ ಪಂಚತಂತ್ರಗಳು

  1. ದಿಟ್ಟಂ (ಪಟ್ಟಿ): ಶ್ರೀನಿವಾಸನಿಗೆ ನಿತ್ಯ ಸಮರ್ಪಿಸುವಂತಹ ನೈವೇದ್ಯ ತಯಾರಿಗೆ ಬಳಸುವಂತಹ  ಕಚ್ಚಾ ವಸ್ತುಗಳನ್ನು ಯಾವ ಪ್ರಮಾಣದಲ್ಲಿ ಎಷ್ಟೆಷ್ಟು ಬಳಸಬೇಕು ಎಂಬುದು ಇದರ ಉದ್ದೇಶ. ಇಂದಿಗೂ ಸ್ವಾಮಿಗೆ ಸಮರ್ಪಿಸುವ ನೈವೇದ್ಯ, ಪೂಜಾ ಸೇವೆ,  ಪುಷ್ಷ ಸೇವೆ ಇತ್ಯಾದಿಗಳು  ಈ ದಿಟ್ಟದ ಆಧಾರವಾಗಿಯೇ ನಡೆಯುತ್ತವೆ. ಈ ದಿಟ್ಟದ ಕಾರಣದಿಂದಾಗಿಯೇ ಸ್ವಾಮಿಯ ಪ್ರಸಾದ  ಇಂದಿಗೂ ಅಮೋಘವಾಗಿಯೇ ಇದೆ.
  2. ಕೈಂಕರ್ಯಪಟ್ಟಿ: ತಿರುಮಲ ದೇವಸ್ಥಾನದ  ಸಿಬ್ಬಂದಿ, ಪರಿಚಾರಕರು, ಸೇವರಕು, ಜಿಯರ್ ಸಿಬ್ಬಂದಿಗಳ ಕರ್ತವ್ಯಗಳ ಬಗ್ಗೆ ಇದರಲ್ಲಿ ಸಂಪೂರ್ಣ ವಿವರಗಳಿವೆ. ಈ ಪಟ್ಟಿಯು ಉತ್ತರ ಆರ್ಕಾಟ್ ಜಿಲ್ಲೆಯ ಕಲೆಕ್ಟರ್, ತಿರುಪತಿ ತಹಶೀಲ್ದಾರ್ ಮತ್ತು ದೇವಸ್ಥಾನ ನಿರ್ವಾಹಕರ ಬಳಿ ಇರುತ್ತದೆ.
  3. ಬ್ರೂಸ್ ಕೋಡ್: ದೇವಸ್ಥಾನದ ಆಡಳಿತ ಕುರಿತಂತೆ ಬ್ರೂಸ್ ಕೋಡ್ ನ್ನು ರಚಿಸಲಾಗಿದೆ. ಬ್ರಿಟೀಷ್ ಪ್ರಾವಿನ್ಸಿಯಲ್ ಜಡ್ಜ್ ಪಿ.ಬ್ರೂಸ್ ಈಸ್ಟ್ ಇಂಡಿಯಾ ಕೋಡ್ ಆಫ್ ಡೈರೆಕ್ಟರ್ ಅವರ ನಿಯಮಾವಳಿಗಳ ಪ್ರಕಾರ ದೇವಸ್ಥಾನದ ಆಡಳಿತವನ್ನು ಸುಗಮವಾಗಿ ನಡೆಸಲು  1821 ಜೂನ್ 25ರಂದು ಪ್ರತ್ಯೇಕವಾಗಿ ನಿಯಮಾವಳಿಯೊಂದನ್ನು ರೂಪಿಸಿದರು.  ಈನಿಯಮಾವಳಿ ಪ್ರಕಾರವೇ ದೇವಸ್ಥಾನದ ಆಡಳಿತ ನಡೆಯಬೇಕೆಂದು ಅಂದಿನ ಮದ್ರಾಸ್ ಸರ್ಕಾರ ಸೂಚಿಸಿತು. ಅಂದಿನಿಂದ  ಇದು ಬ್ರೂಸ್ ಕೋಡ್ ಎಂದೇ ಪ್ರಖ್ಯಾತಿ ಪಡೆದಿದೆ.
  4. ಸವಾಲ್.. ಇ.. ಜವಾಬ್..: ಶ್ರೀನಿವಾಸನ ಸೇವೆ, ಆಡಳಿತ, ಆದಾಯ, ಖರ್ಚು ವೆಚ್ಚಗಳು, ತಿರುಮಲ ಇತಿಹಾಸ, ಚರಿತ್ರೆ ಕುರಿತಂತೆ ಸಂಪೂರ್ಣವಾಗಿ ಮಾಹಿತಿ ನೀಡಲು ಅಂದಿನ ಬ್ರಿಟೀಷ್ ಸರ್ಕಾರ 1819ರಲ್ಲಿ ಹೊಸದೊಂದು ಯೋಜನೆಯನ್ನು ರೂಪಿಸಿತು. ಇದು ಮುಂದೆ ಪ್ರಶ್ನೋತ್ತರಗಳ ದಾಖಲೆಗಳಾಗಿ ರಚನೆಯಾಯಿತು. ಇದನ್ನೇ ನಾವು ಸವಾಲ್.. ಇ.. ಜವಾಬ್… ಎಂದು ಕರೆಯುತ್ತೇವೆ.
  5. ಪೈ ಮೈಯಿಷಿ ಅಂಕೌಂಟ್: ಕಿಂಗ್ ಜಾರ್ಜ್, ಕ್ವೀನ್ ವಿಕ್ಟೋರಿಯಾ ರಾಣಿ ಯವರ ಚಿತ್ರಗಳುಳ್ಳ 492 ಕಾಸುಗಳ ಹಾರವೊಂದನ್ನು ಶ್ರೀನಿವಾಸನಿಗೆ ಸಮರ್ಪಿಸಲು ಪರಂಗಿ ದೊರೆಗಳು ತಯಾರಿಸಿದರು. ದೇವಸ್ಥಾನದಲ್ಲಿರುವ ಪ್ರಧಾನ ಮೂರ್ತಿಗೆ 1972ಕ್ಕೂ ಮುಂಚೆ ಇದೇ ಆಭರಣದೊಂದಿಗೆ ಅಲಂಕರಿಸಲಾಗುತ್ತಿತ್ತು. ಪ್ರಸ್ತುತ ಸ್ವಾಮಿಗೆ ಅನೇಕ ಭಕ್ತರಿಂದ ಅನೇಕ ವಿಧವಾದ ಆಭರಣಗಳು ಸಮರ್ಪಣೆಯಾಗುತ್ತಿರುವುದರಿಂದ ಹಳೆಯ ಆಭರಣಗಳನ್ನು ಟಿಟಿಡಿಯವರು ಖಜಾನೆಯಲ್ಲಿ ಮುಚ್ಚಿಡುತ್ತಿದ್ದಾರೆ. ಪ್ರಸ್ತುತ ಆಲಯದಲ್ಲಿರುವ ಹುಂಡಿ, ಕೊಪ್ಪರಗಿ ಕೂಡ ಬ್ರೀಟೀಷ್ ಸರ್ಕಾರ ಏರ್ಪಡಿಸಿರುವುದಾಗಿ ಬ್ರೂಸ್ ಕೋಡ್-12 ರಲ್ಲಿ ತಿಳಿದು ಬರುತ್ತಿದೆ.

ಸ್ವಾಮಿಗೆ ಪ್ರಸಾದವಾಗಿ ಲಡ್ಡೂವನ್ನು ನಿರ್ಧರಿಸಿದ್ದು ಪರಂಗಿಯವರೇ!

MUNROಕಾಲುದಾರಿ ಬಿಟ್ಟು ವಾಹನ ಸಂಚಾರಕ್ಕೆ ರಸ್ತೆಯೇ ಇಲ್ಲದ ತಿರುಮಲ ಶೇಷಾಚಲ ಕಾಡಿನಲ್ಲಿ ಪ್ರಥಮ ಬಾರಿಗೆ ಅಂದಿನ ಮದ್ರಾಸ್ ಸರ್ಕಾರ ಮತ್ತು ಬ್ರಿಟೀಷ್ ಗವರ್ನರ್  ಆರ್ಡರ್ ಹೂಸ್ ನೇತೃತ್ವದಲ್ಲಿ ವಿಶ್ವವಿಖ್ಯಾತ  ಇಂಜಿನಿಯರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಮಾರ್ಗದರ್ಶನದಲ್ಲಿ  ರಸ್ತೆ ನಿರ್ಮಾಣ ಮಾಡಲಾಯಿತು. ಇವರು ಅದನ್ನೆಲ್ಲಾ ಆಡಳಿತ ಭಾಗವಾಗಿ ಮಾಡಿದ್ದಾರೆ ಎಂದು ಅಭಿಪ್ರಾಯಪಡಬಹುದು. ಆದರೆ ಅವರು ತಮ್ಮ ಕೆಲಸದ ಮೂಲಕ ಸ್ವಾಮಿಗೆ ಭಕ್ತಿಯನ್ನು ತೋರಿಸಿದ್ದಾರೆ ಎಂಬುದನ್ನು ಮರೆಯಲಾಗುವುದಿಲ್ಲ.

ಮನ್ರೋ ಗಂಗಾಳಂ: ಸ್ವಾಮಿಗೆ ನೈವೇದ್ಯವಾಗಿ ಸಮರ್ಪಿಸುವ ಅನ್ನಪ್ರಸಾದಗಳನ್ನು ಇಡುವ ಪಾತ್ರೆಯನ್ನು ಮನ್ರೋಗಂಗಾಳಂ ಎಂದು ಕರೆಯುತ್ತಾರೆ. ಒಂದು ಕಾಲದಲ್ಲಿ ರಾಯಲಸೀಮ ಪ್ರಾಂತ್ಯವನ್ನು ಆಳಿದ ಸರ್ ಥಾಮಸ್ ಮನ್ರೋ ಅವರಿಗೆ ಶ್ರೀನಿವಾಸನನ್ನು ದರ್ಶಿಸಬೇಕು ಎಂಬ ಬಯಕೆ ವಿಪರೀತವಾಗಿತ್ತಂತೆ. ಆದರೆ, ಕಾರಣಾಂತರಗಳಿಂದ ಅವರು ಸ್ವಾಮಿಯನ್ನು ದರ್ಶಿಸಿಕೊಳ್ಳಲು ಸಾಧ್ಯವಾಗಲಿಲ್ಲವಂತೆ. ಹಾಗಾಗಿ ಇಂದಿಗೂ ಸರ್ ಥಾಮಸ್ ಮನ್ರೋ ಅವರು ಸ್ವಾಮಿಗಾಗಿ ಸಮರ್ಪಿಸಿದ ದೊಡ್ಡ ಪಾತ್ರೆಯಲ್ಲಿಯೇ ನೈವೇದ್ಯ ಕೊಡಲಾಗುತ್ತಿದೆ.

 Related posts

Leave a Comment