ತಿರುಪತಿ ಗರ್ಭಗುಡಿಯ ಮೇಲ್ಬಾಗದಲ್ಲಿ ಹಾರಿದ ವಿಮಾನ: ಅರ್ಚಕರ ಅಸಮಾಧಾನ.

ತಿರುಪತಿ: ತಿರುಪತಿ ಶ್ರೀ ವೆಂಕಟರಮಣ ದೇವಸ್ಥಾನದ ಗರ್ಭಗುಡಿಯ ಮೇಲ್ಭಾಗ ವಿಮಾನವೊಂದು ಹಾರಾಡುವ ಮೂಲಕ ಅಲ್ಲಿನ ಅರ್ಚಕರ ಮತ್ತು ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟಿನ ಅಸಮಾಧಾನಕ್ಕೆ ಗುರಿಯಾಗಿದೆ. ಆಗಮನ ಶಾಸ್ತ್ರದ ಪ್ರಕಾರ ದೇವಾಲಯದ ಮೇಲ್ಭಾಗ ವಿಮಾನ ಹಾರಾಟ ಅಪಾಯಕಾರವಾಗಿದ್ದು, ಈ ಭಾಗದಲ್ಲಿ ವಿಮಾನ ಹಾರಾಟವನ್ನು ನಿರ್ಭಂಧಿಸುವಂತೆ ದೇವಾಲಯದ ಆಡಳಿತ ಮಂಡಳಿ ಆಗ್ರಹಿಸಿದೆ.ದೇವಾಲಯದ ಕೋರಿಕೆಯ ಮೇರೆಗೆ ಹೆಚ್ಚಾಗಿ ಗರ್ಭ ಗುಡಿಯ ಮೇಲ್ಭಾಗದ ನೇರದಲ್ಲಿ ವಿಮಾನ ಹಾರಾಟ ನಡೆಸುವುದಿಲ್ಲವಾದರೂ, ಈ ಹಿಂದೆ ಹವಾಮಾನ ವೈಪಾರೀತ್ಯವಾದಾಗ ಕೆಲವೊಮ್ಮೆ ವಿಮಾನ ಹಾರಾಡಿದ ಪ್ರಸಂಗಗಳಿವೆ. ಈ ಕುರಿತು ದೇವಾಲಯ ಆಡಳಿತ ಮಂಡಳಿ (ಟಿಟಿಡಿ) ಕೇಂದ್ರಕ್ಕೆ ದೂರು ಸಲ್ಲಿಸಿ, ದೇವಾಲಯದ ಗರ್ಭಗುಡಿಯ ಮೇಲ್ಭಾಗವನ್ನು ‘ವಿಮಾನ ಹಾರಾಟ ನಿರ್ಭಂಧಿತ’ ಪ್ರದೇಶವನ್ನಾಗಿ ಘೋಷಿಸಬೇಕಾಗಿ ಕೋರಿಕೊಂಡಿದ್ದರೂ ಭಾರತೀಯ ವಿಮಾನಯಾನ ಪ್ರಾಧಿಕಾರ (ಇಂಡಿಯನ್ ಏರ್ ಲೈನ್ ಅಥಾರಿಟಿ) ಈ ಕುರಿತು ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂದು ಕೇಂದ್ರ ಸರ್ಕಾರ ನುಣುಚಿಕೊಂಡಿದೆ. “ಕೇಂದ್ರ ಸರ್ಕಾರ ತಿರುಪತಿ ತಿರುಮಲ ದೇವಾಲಯ ಟ್ರಸ್ಟಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಶೀಘ್ರ ಸ್ಪಂದಿಸಬೇಕು, ದೇವಾಲಯದ ಗರ್ಭಗುಡಿಯ ಮೇಲ್ಭಾಗವನ್ನು ವಿಮಾನ ಹಾರಾಟ ನಿಶೇಧಿತ ಪ್ರದೇಶವೆಂದು ಘೋಷಿಸಬೇಕು” ಎಂದು ದೇವಾಲಯದ ಪ್ರಧಾನ ಅರ್ಚಕ ರಮನ್ ದೀಕ್ಷಿತ್ ಒತ್ತಾಯಿಸಿದ್ದಾರೆ.

ತೀವ್ರ ಕಟ್ಟುನಿಟ್ಟಿನ ಹಿಂದೂ ದೇವಾಲಯವಾಗಿರುವ ತಿರುಪತಿ ಶ್ರೀ ವೆಂಕಟರಮಣ ಸ್ವಾಮಿ ದೇವಾಯದ ಗರ್ಭಗುಡಿಯ ನೇರ ಮೇಲ್ಭಾಗದಲ್ಲಿ ವಿಮಾನ ಹಾರಾಟ ಅಧಿಕೃತವಾಗಿ ನಿರ್ಭಂಧಿಸಿಲ್ಲವಾಗಿದ್ದರೂ ದೇವಾಲಯದ ಆಡಳಿತ ಮಂಡಳಿಯ ಕೋರಿಕೆಯ ಮೇರೆಗೆ ವಿಮಾನ ಹಾರಾಟವನ್ನು ನಿಲ್ಲಿಸಲಾಗಿತ್ತು. ಬುಧವಾರ ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ತಿರುಪತಿಯಿಂದ ಹೈದರಾಬಾದ್ ಗೆ ತೆರಳುವ ಸ್ಪೈಸ್ ಜೆಟ್ ವಿಮಾನ ದೇವಾಲಯದ ಗರ್ಭಗುಡಿಯ ಮೇಲ್ಗಡೆ ಹಾರಾಡಿದ್ದು ಅರ್ಚಕರ ಮತ್ತು ಆಡಳಿತ ಮಂಡಳಿಯ ಅಸಮಧಾನಕ್ಕೆ ಕಾರಣವಾಗಿದೆ.

ದೇವಾಲಯದ ಸುತ್ತಮುತ್ತ ಹೆಚ್ಚಿನ ಜನಸಂಖ್ಯೆ ಇರುವುದರಿಂದ ದೇವಾಲಯದ ಮೇಲ್ಭಾಗದಲ್ಲಿ ಹಾರಾಡುವ ವಿಮಾನ ಒಂದು ವೇಳೆ ಅಪಘಾತವಾದರೆ ಅಪಾರ ಸಾವು-ನೋವು ಸಂಭವಿಸಲಿದೆ. ಅದಕ್ಕಿಂತಲೂ ಹೆಚ್ಚಾಗಿ ದೇವಾಲಯದ ಆಗಮನಶಾಸ್ತ್ರ ಸಂಪ್ರದಾಯದಂತೆ ಗರ್ಭಗುಡಿಯ ಮೇಲುಗಡೆ ವಿಮಾನ ಹಾರಾಡುವಂತಿಲ್ಲ ಎಂಬ ಉಲ್ಲೇಖವಿರುವುದರಿಂದ ದೇವಾಲಯದ ಮೇಲೆ ನಂಬಿಕೆಯಿಟ್ಟಿರುವ ಹೆಚ್ಚಿನ ಭಕ್ತರಿಗೆ ನಿಯಮಾವಳಿಗೆ ಮೀರಿದ ವಿಮಾನ ಹಾರಾಟ ನೋವು ತರಲಿದೆ ಎಂಬುದು ದೇವಾಲಯದ ವಾದ.

Photo credit: Wiki Commons

 Related posts

Leave a Comment